
ಮನೆ ಕಳ್ಳತನ ಪ್ರಕರಣ: ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಇಬ್ಬರು ಬಂಧನ
ಉಡುಪಿ: ಅಂಬಲಪಾಡಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಉಡುಪಿ ನಗರ ಠಾಣೆ ಪೊಲೀಸರು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ಗೆ ಸೇರಿದ ಎನ್ನಲಾದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನಗದು, ವಾಚ್ಗಳು, ಬೆಳ್ಳಿ ನಾಣ್ಯ ಸೇರಿದಂತೆ ಒಟ್ಟು ?೪.೫೦ ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಶಿ ತಾಲೂಕಿನ ಅಕ್ರೌಲಿ ಗ್ರಾಮದ ಮೊಹಮ್ಮದ್ ಜಾಫರ್ (೨೨) ಹಾಗೂ ಕದೀರ್ (೩೨) ಎಂದು ಗುರುತಿಸಲಾಗಿದೆ.
ಅಂಬಲಪಾಡಿಯ ಕುಂಜುಗುಡ್ಡೆ ರಸ್ತೆ, ಸಹಾರಾ ಅಪಾರ್ಟ್ಮೆಂಟ್ ಸಮೀಪದ ನಿವಾಸಿ ಎ.ಎಸ್. ರಾಮಮೂರ್ತಿ (೭೦) ಅವರು ಜುಲೈ ೯ರಂದು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ಜುಲೈ ೧ರಂದು ಮಧ್ಯಾಹ್ನ ೧.೩೦ರ ಸುಮಾರಿಗೆ ಮನೆಗೆ ಬೀಗ ಹಾಕಿ ಮಂಗಳೂರಿನಲ್ಲಿರುವ ಮಗಳ ಮನೆಗೆ ತೆರಳಿದ್ದ ಅವರು, ಜುಲೈ ೯ರಂದು ಬೆಳಗ್ಗೆ ಮನೆಗೆ ವಾಪಸಾದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದು ಕಳ್ಳರು ಒಳನುಗ್ಗಿರುವುದು ಗಮನಕ್ಕೆ ಬಂದಿತ್ತು.
ಮನೆಯೊಳಗೆ ಪರಿಶೀಲಿಸಿದಾಗ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದ್ದು, ಕಪಾಟಿನಲ್ಲಿದ್ದ ?೬ ಲಕ್ಷ ನಗದು ಹಾಗೂ ಮೂರು ವಾಚ್ಗಳು ಕಳವಾಗಿರುವುದು ತಿಳಿದುಬಂದಿತ್ತು. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೆಪ್ಟೆಂಬರ್ ೨ರಂದು ಖಚಿತ ಮಾಹಿತಿಯ ಮೇರೆಗೆ ಉಡುಪಿ ಇಂದ್ರಾಳಿ ರೈಲು ನಿಲ್ದಾಣದ ಬಳಿ ಮೊಹಮ್ಮದ್ ಜಾಫರ್ನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಜಾಫರ್ ಹಾಗೂ ಕದೀರ್ ಸೇರಿಕೊಂಡು ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ಆರೋಪಿಯ ಬಳಿಯಿಂದ ?೧.೫೦ ಲಕ್ಷ ನಗದು ಹಾಗೂ ಸುಮಾರು ?೮,೦೦೦ ಮೌಲ್ಯದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಪೊಲೀಸ್ ಅಭಿರಕ್ಷೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಿದ ಪೊಲೀಸರು ಅಲ್ಲಿ ?೧.೦೬ ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು.
ತನಿಖೆ ಮುಂದುವರಿಸಿದ ಪೊಲೀಸರು ಸೆಪ್ಟೆಂಬರ್ ೨೫ರಂದು ಮೂಡಬಿದ್ರೆಯಲ್ಲಿ ಎರಡನೇ ಆರೋಪಿ ಕದೀರ್ನನ್ನು ಬಂಧಿಸಿದ್ದಾರೆ. ಆತನ ಬಳಿಯಿಂದ ?೧.೬೫ ಲಕ್ಷ ನಗದು, ಸುಮಾರು ?೬,೦೦೦ ಮೌಲ್ಯದ ಎರಡು ಬೆಳ್ಳಿ ನಾಣ್ಯಗಳು, ?೧೫,೦೦೦ ಮೌಲ್ಯದ ವಿವಿಧ ಕಂಪನಿಗಳ ಐದು ವಾಚ್ಗಳು, ಕೃತ್ಯಕ್ಕೆ ಬಳಸಿದ ಎರಡು ಸ್ಕ್ರೂಡ್ರೈವರ್ಗಳು ಹಾಗೂ ಕಂದು ಬಣ್ಣದ ಬ್ಯಾಗ್ನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಒಟ್ಟು ?೪,೫೦,೫೦೦ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ವಿವಿಧ ಪ್ರಕರಣಗಳು
ಪೊಲೀಸರ ಪ್ರಕಾರ, ಇಬ್ಬರೂ ಆರೋಪಿಗಳು ಉತ್ತರ ಪ್ರದೇಶದ ಬೆಡಿಯಾ ಗ್ಯಾಂಗ್ನ ಸದಸ್ಯರಾಗಿದ್ದು, ಉತ್ತರ ಪ್ರದೇಶದ ಅಕ್ರೌಲಿ ಗ್ರಾಮದ ನಿವಾಸಿಗಳಾಗಿದ್ದಾರೆ. ಮೊದಲ ಆರೋಪಿ ಮೊಹಮ್ಮದ್ ಜಾಫರ್ ವಿರುದ್ಧ ಉತ್ತರಾಖಂಡದ ನೈನಿತಾಲ್ ಪೊಲೀಸ್ ಠಾಣೆಯಲ್ಲಿ ಒಂದು ಮನೆ ಕಳ್ಳತನ ಪ್ರಕರಣ ದಾಖಲಾಗಿದೆ.
ಎರಡನೇ ಆರೋಪಿ ಕದೀರ್ ವಿರುದ್ಧ ಉತ್ತರ ಪ್ರದೇಶದ ಬನಿಯಾಟೇರ್ ಪೊಲೀಸ್ ಠಾಣೆಯಲ್ಲಿ ಒಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಹಾಗೂ ಎರಡು ಮನೆ ಕಳ್ಳತನ ಪ್ರಕರಣಗಳು ಮತ್ತು ಮುರಾದಾಬಾದ್ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಒಂದು ಅಕ್ರಮ ಶಸ್ತ್ರಾಸ್ತ್ರ ಪ್ರಕರಣ ಹಾಗೂ ಎರಡು ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಆರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಐಪಿಎಸ್ ಅವರ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್ ಹಾಗೂ ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಪಿಎಸ್ಐ ರತ್ನಾಕರ್ ಕೆ., ಎಎಸ್ಐ ಹರೀಶ್, ಪ್ರಸನ್ನ ಸಿ., ಜೀವನ್ ಕುಮಾರ್, ಆನಂದ ಗಾಣಿಗ, ಆನಂದ, ಓಬಳೇಶ್, ಆನಂದಯ್ಯ, ಮಣಿಪಾಲ ಠಾಣೆಯ ಮಲ್ಲಯ್ಯ ಹಿರೇಮಠ ಸೇರಿದಂತೆ ಉಡುಪಿ ನಗರ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.


























