
ಪುತ್ತೂರು; ಕಡಲ ತೀರದ ಭಾರ್ಗವ ಖ್ಯಾತಿಯ ಡಾ.ಶಿವರಾಮ ಕಾರಂತ ಅವರ ನಾಟ್ಯಶಾಲೆಯಾಗಿದ್ದ ನೆಲ್ಲಿಕಟ್ಟೆ ಶಿವರಾಮ ಕಾರಂತ ಶಾಲೆ ನಾದುರಸ್ಥಿಯಲ್ಲಿದ್ದ ಪರಿಣಾಮ ಅಪಾಯಕಾರಿ ಕಟ್ಟಡ ಎನ್ನುವ ನೆಲೆಯಲ್ಲಿ ಕಳೆದ ೪ ವರ್ಷಗಳ ಹಿಂದೆ ತೆರವು ಮಾಡಲಾಗಿತ್ತು. ಆದರೆ ಈ ಕಟ್ಟಡದ ಅಸ್ತಿಪಂಜರ ಮಾತ್ರ ಅಲ್ಲಿಯೇ ಇದೆ. ಸುತ್ತ ಮುತ್ತ ಶಾಲಾ ಕಟ್ಟಡಗಳು, ಒಂದೆಡೆ ಶಾಲಾ ಕಟ್ಟಡದಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರ. ಮತ್ತೊಂದೆಡೆ ಶಿಕ್ಷಣಸಂಪನ್ಮೂಲ ಕೇಂದ್ರದ ಕಚೇರಿ. ವಿಶೇಷಚೇತನ ಮಕ್ಕಳ ಶಾಲೆ, ಅಂಗನವಾಡಿಗಳ ಸಂಗಮ ಕ್ಷೇತ್ರ. ಮಧ್ಯೆ ಪೊದೆಯಾಗಿ ಬೆಳೆದುನಿಂತ ಕಾರಂತರ ನಾಟ್ಯಶಾಲೆಯ ಅವಶೇಷ.

brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
ಡಾ.ಕಾರಂತರ ನಾಟ್ಯಶಾಲೆಯನ್ನು ತೆರವು ಮಾಡಿದಾಗ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅದೊಂದು ಪ್ರಾಚ್ಯವಸ್ತು ಪುರಾತತ್ವ ಇಲಾಖೆಯಡಿಯಲ್ಲಿ ಉಳಿಸಿಕೊಳ್ಳಬೇಕು. ಆ ಮೂಲಕ ಕಾರಂತರ ನೆನಪನ್ನು ಶಾಶ್ವತಗೊಳಿಸಬೇಕು ಎಂಬೆಲ್ಲಾ ಮಾತುಗಳು ಕೇಳಿಬಂದಿದ್ದವು. ಆದರೂ ಕುಸಿಯುವ ಭೀತಿಯಲ್ಲಿದ್ದ ಈ ಕಟ್ಟಡವನ್ನು ರಾತೋರಾತ್ರಿ ಬೀಳಿಸಲಾಗಿತ್ತು. ಇದಕ್ಕೆ ಯಾವುದೇ ಇಲಾಖೆಯಿಂದ ಅಧಿಕೃತ ಪರವಾನಿಗೆ ಪಡೆದಿರಲಿಲ್ಲ. ಈ ವಿವಾದ ತಾರಕ್ಕೇರಿ ಕೊನೆಗೆ ಕಟ್ಟಡವೇ ಕುಸಿದು ಬಿದ್ದಿದೆ ಎಂಬಲ್ಲಿಗೆ ಅಂತ್ಯವಾಗಿತ್ತು. ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ನ್ಯಾಯಾಲಯಕ್ಕೆ ದೂರು ನೀಡುವ ಮಾತುಗಳೂ ಕೇಳಿಬಂದಿತ್ತು. ಜಿಲ್ಲಾಧಿಕಾರಿ ಅವರಿಗೆ ದೂರು ಸಲ್ಲಿಸಲಾಗಿತ್ತು. ಅಲ್ಲಿಗೆ ಎಲ್ಲವೂ ತಣ್ಣಗಾಗಿತ್ತು. ಕಾರಂತರ ನಾಟ್ಯಶಾಲೆ ಮರುನಿರ್ಮಾಣ ಮರೀಚಿಕೆಯಾಯಿತು.
ಕಾಲ ಸರಿದಂತೆ ಕಾರಂತರ ನಾಟ್ಯ ಶಾಲೆ ಜನತೆಯ ನೆನಪಿನಿಂದ ಅಳಿಸಿಹೊಯಿತು. ಈ ಬಗ್ಗೆ ಧ್ವನಿ ಎತ್ತಿದವರೂ ಮೌನವಾದರು. ಜನಪ್ರತಿನಿಧಿಗಳೂ ನಿರ್ಲಕ್ಷ್ಯ ತಾಳಿದರು. ಆದರೆ ಇದಲ್ಲೆದರ ಕುರುಹಾಗಿ ಬೀಳಿಸಿದ ಗೋಡೆ, ನಾಟ್ಯಶಾಲೆಯ ಪಂಚಾಂಗ ಕಾಡುಬೆಳೆಸುತ್ತಾ ಹಾಗೆಯೇ ಉಳಿಯಿತು. ೪ ವರ್ಷವಾದರೂ ಈ ಅವಶೇಷಗಳನ್ನು ತೆರವು ಮಾಡುವ ತೊಂದರೆಯನ್ನು ಯಾರೂ ತೆಗೆದುಕೊಳ್ಳಲಿಲ್ಲ. ಡಾ.ಕಾರಂತರ ನಾಟ್ಯ ಶಾಲೆ ಎಲ್ಲಿತ್ತು ಎಂದು ಕೇಳಿದರೆ ಈ ಅವಶೇಷದ ಗುಡ್ಡವನ್ನು ತೋರಿಸುವಲ್ಲಿಗೆ ಮುಟ್ಟಿದೆ. ಶೇಕ್ಸ್‌ಪಿಯರ್ ಮಾದರಿಯಲ್ಲಿ ಸುತ್ತ ಗ್ಯಾಲರಿ ಹೊಂದಿದ್ದ ನಡುವೆ ನಾಟ್ಯತಾಣದ ಕಾರಂತರ ನಾಟ್ಯವೈಭವದ ರಂಗಮಂದಿರ ಈಗ ಕೇವಲ ನೆನಪು ಮಾತ್ರವಾಗಿ ಉಳಿದಿದೆ. ಈ ನೆನಪನ್ನು ಉಳಿಸುವ ಕೆಲಸವನ್ನು ಈ ಹಾವು ಹುಳಹುಪ್ಪಟಿಗಳ ಕೇಂದ್ರವಾದ ಗುಡ್ಡದ ಕುರುಹು ಮಾಡುತ್ತಿದೆ.
ಕೋರ್ಟ್ ವ್ಯಾಜ್ಯ ಎಂಬ ಗುಮ್ಮ..!
ಕಾರಂತರ ನಾಟ್ಯ ಶಾಲೆ ತೆರವು ಮಾಡಲು ಇದ್ದ ಉತ್ಸಾಹ ಈ ಅವಶೇಷಗಳ ತೆರವಿಗೆ ಯಾರಲ್ಲೂ ಕಾಣುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅದು ಕೋರ್ಟಿನಲ್ಲಿದೆ ಎಂಬ ಗುಮ್ಮವನ್ನು ತೋರಿಸಲಾಗುತ್ತಿದೆ. ವಾಸ್ತವವಾಗಿ ಈ ಬಗ್ಗೆ ಕೋರ್ಟಿನಲ್ಲಿ ಯಾವುದೇ ವ್ಯಾಜ್ಯಗಳನ್ನು ಹೂಡಲಾಗಿಲ್ಲ ಎಂದು ತಿಳಿದುಬಂದಿದೆ. ಹಾಗಿದ್ದರೂ ಇಲಾಖಾಧಿಕಾರಿಗಳು ಮಾತ್ರ ಈ ವ್ಯಾಜ್ಯ ಕೋರ್ಟಿನಲ್ಲಿದೆ ಎಂದೇ ಹೇಳುತ್ತಿದ್ದಾರೆ. ಈ ನಡುವೆ ಜಿಲ್ಲಾಧಿಕಾರಿ ಅವರು ಈ ಮಣ್ಣು ಹಾಗೂ ಮರಮುಟ್ಟುಗಳನ್ನು ಮುಟ್ಟದಂತೆ ತಡೆ ಕೊಟ್ಟಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಕಳೆದ ೪ ವರ್ಷಗಳಿಂದ ಈ ಗುಮ್ಮಗಳನ್ನೇ ತೋರಿಸಿಕೊಂಡು ಮಣ್ಣಿನ ಗುಡ್ಡವನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತಿದೆ.
ಅನಾಥ-ಕಡುಬಡವರ ಮಕ್ಕಳು ತಾಣ
ನೆಲ್ಲಿಕಟ್ಟೆಯ ಈ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿರುವ ಶೇ.೫೦ರಷ್ಟು ಮಕ್ಕಳು ಇಲ್ಲಿನ ರಾಮಕೃಷ್ಣ ಅನಾಥಶ್ರಮಕ್ಕೆ ಸೇರಿದವರು. ಉಳಿದವರು ಬೊಟ್ಟತ್ತಾರು ಭಾಗದ ಕಡುಬಡತನದ ಕುಟುಂಬಗಳ ಮಕ್ಕಳು. ಹಾಗಾಗಿ ಇಲ್ಲಿ ಶಾಲಾಭಿವೃದ್ಧಿ ಸಮಿತಿಯಲ್ಲಿ ಹೆಚ್ಚಿನ ದೃಢತೆ ವ್ಯಕ್ತವಾಗುತ್ತಿಲ್ಲ. ಅವಶೇಷದ ತೆರವಿಗೆ ಶಾಲಾಭಿವೃದ್ದಿಯ ತೊಡಕಿಗೆ ಇದೂ ಒಂದು ಕಾರಣವಾಗಿದೆ. ಈಗಾಗಲೇ ಒತ್ತುವರಿಯಿಂದ ಸ್ವಲ್ಪ ಸ್ಥಳವನ್ನು ಕಳೆದುಕೊಂಡ ಶಾಲೆ ಮುಂದೆ ಇಡೀ ಜಾಗವನ್ನೇ ಕಳೆದುಕೊಳ್ಳುವ ಸಾಧ್ಯತೆ ಹಾಗೂ ಹುನ್ನಾರವನ್ನೂ ಎದುರಿಸಬೇಕಾಗಿದೆ.
ಮೇಘಾ ಪಾಲೆತ್ತಾಡಿ

























