Home ಜಿಲ್ಲೆ ಮಂಗಳೂರು ೪೨ ಲಕ್ಷ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶ: ಇಬ್ಬರ ಬಂಧನ

೪೨ ಲಕ್ಷ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ವಶ: ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೋಳಂತೂರು ಗ್ರಾಮದ ಎನ್.ಸಿ.ರೋಡ್ ನಿವಾಸಿ ಮುಹಮ್ಮದ್ ನಿಝಾಮುದ್ದೀನ್ ಹಾಗೂ ಆತನ ಸಹೋದರ ಮಹಮ್ಮದ್ ಸಾಹೀಮ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ಮಂಚಿ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು ೪೨.೩೦ ಲಕ್ಷ ರೂ. ಮೌಲ್ಯದ ೪೨೩ ಗ್ರಾಂ ಎಂಡಿಎಂಎ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಸಾಗಾಟಕ್ಕೆ ಬಳಸಲಾದ ವಾಹನ, ೩ ಮೊಬೈಲ್ ಫೋನ್ ಗಳು ಸೇರಿದಂತೆ ಒಟ್ಟು ಸುಮಾರು ೪೭ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ, ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಮಂಜುನಾಥ್ ಟಿ., ಬಂಟ್ವಾಳ ನಗರ ಠಾಣಾ ಪಿಎಸ್ಸೈ ಸಂದೀಪ್ ಶೆಟ್ಟಿ, ಹಾಗೂ ಸಿಬ್ಬಂದಿಯಾದ ನಝೀರ್, ಲೋಕೇಶ್, ಪ್ರಶಾಂತ್, ಶೇಖರ್, ವಿಜಯ ಕುಮಾರ್, ಕುಮಾರ್ ಎಚ್.ಕೆ., ವಿವೇಕ್ ರೈ, ನಾಗನಾಥ, ಸುರೇಶ್ ಉಪ್ಪಾರ್, ಬಸವರಾಜ್, ಮಹಾದೇವ್, ಜಗದೀಶ್ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಂಪತ್, ದಿವಾಕರ್ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.