೩೦೦ ಹಾಸಿಗೆಗಳ ಆಸ್ಪತ್ರೆ ಮೆಡಿಕಲ್ ಕಾಲೇಜು-ಆರ್ಥಿಕ ಇಲಾಖೆಯ ಸಮ್ಮತಿ

ರೈ ಭರವಸೆಗೆ ಸಿಕ್ಕಿದ ಅರ್ಥ..
ಪುತ್ತೂರು: ಪುತ್ತೂರಿನ ಮೆಡಿಕಲ್ ಕನಸು ನನಸಾಗಿದೆ. ಘೋಷಣೆ ಮಾತ್ರ ಅನುದಾನ ಬರುವುದಿಲ್ಲ ಎಂದು ಟೀಕೆ ಮಾಡುತ್ತಿದ್ದ ವಿರೋಧ ಪಕ್ಷಗಳ ಮಾತು ಸುಳ್ಳಾಗಿದೆ. ಚುನಾವಣೆಯ ಸಂದರ್ಭ ಅಶೋಕ್ ರೈ ನೀಡಿದ ಭರವಸೆಗೆ ಇದೀಗ ಅರ್ಥ ಸಿಕ್ಕಿದೆ. ಪುತ್ತೂರಿನಲ್ಲಿ ೩೦೦ ಹಾಸಿಗೆಗಳ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಡಿ ನೂತನ ಸ್ಥಳದಲ್ಲಿ ನಿರ್ಮಿಸಲು ಆರ್ಥಿಕ ಇಲಾಖೆ ಸಮ್ಮತಿಸಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಸೋಮವಾರ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಈಗಾಗಲೇ ಬನ್ನೂರಿನಲ್ಲಿ ೪೦ ಎಕರೆ ಸ್ಥಳ ಕಾದಿರಿಸಲಾಗಿದ್ದು, ಇಲ್ಲಿಯೇ ನೂತನ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಿಲಾನ್ಯಾಸ ಮಾಡಲಿದ್ದಾರೆ. ಅಲ್ಲಿಗೆ ಬನ್ನೂರಿನಲ್ಲಿ ಮೆಡಿಕಲ್ ಆಸ್ಪತ್ರೆ, ಆರೋಗ್ಯ ಇಲಾಖೆಯ ಕಡತವನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಬೇಕು. ೩೦೦ ಆಸ್ಪತ್ರೆಯ ಆಸ್ಪತ್ರೆ ನಿರ್ಮಾಣವಾಗಬೇಕು ಎನ್ನುವ ನನ್ನ ಮೂರು ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈಡೇರಿಸುವ ಮೂಲಕ ಪುತ್ತೂರಿನ ಅಭಿವೃದ್ಧಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದವರು ತಿಳಿಸಿದರು.
ಆರೋಗ್ಯ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸಲು ಆರ್ಥಿಕ ಇಲಾಖೆಯ ಸೂಚನೆಯೊಂದಿಗೆ ಬನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ೧ ಸಾವಿರ ಕೋಟಿ ಅಂದಾಜು ಬಜೆಟ್ ರೂಪಿಸಲಾಗಿದೆ. ಪ್ರಸ್ತುತ ಕಡತ ಆರ್ಥಿಕ ಇಲಾಖೆಯಲ್ಲಿದೆ. ಮುಂದಿನ ಜನವರಿ ಅಂತ್ಯಕ್ಕೆ ಡಿಪಿಆರ್ ಆಗಿ ಫೆಬ್ರವರಿ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಪುತ್ತೂರಿನ ಅಭಿವೃದ್ಧಿಗೆ ದೇವರ ಆಶೀರ್ವಾದ
ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಂಜೂರಾತಿಯ ಅಧಿಕೃತ ಆದೇಶ ಕೈಗೆ ಸಿಕ್ಕ ತಕ್ಷಣವೇ ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ಪುತ್ತೂರು ಕೇಂದ್ರ ಜುಮಾ ಮಸೀದಿ ಹಾಗೂ ಪುತ್ತೂರು ಮಾಯಿದೆ ದೇವುಸ್ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಪುತ್ತೂರಿನ ಅಭಿವೃದ್ಧಿಗೆ ದೇವರ ಆಶೀರ್ವಾದ ದೊರೆತಿದೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದೇನೆ ಎಂದವರು ತಿಳಿಸಿದರು.
ಬನ್ನೂರು ‘ಮಿನಿ ಮಣಿಪಾಲ’
೩೦೦ ಹಾಸಿಗೆಯ ನೂತನ ಮೆಡಿಕಲ್ ಆಸ್ಪತ್ರೆ ಬನ್ನೂರಿನಲ್ಲಿಯ ೪೦ ಎಕರೆ ಪ್ರದೇಶದಲ್ಲಿ ನಿರ್ಮಾಣವಾದ ತಕ್ಷಣ ಪುತ್ತೂರು ತಾಲೂಕು ಆಸ್ಪತ್ರೆ ಹೆರಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ. ನೂತನ ಆಸ್ಪತ್ರೆಯ ನಿರ್ಮಾಣದೊಂದಿಗೆ ಬನ್ನೂರು ‘ಮಿನಿ ಮಣಿಪಾಲ’ವಾಗಿ ಪರಿವರ್ತನೆಯಾಗಲಿದೆ. ಸುಮಾರು ೭ ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ. ವಿಶೇಷವಾಗಿ ಅವಿಭಜಿತ ದಕ ಜಿಲ್ಲೆಯ ತುಳುವರಿಗೆ ಉದ್ಯೋಗದಲ್ಲಿ ಆದ್ಯತೆ ದೊರಕಲಿದೆ ಎಂದವರು ತಿಳಿಸಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಗ್ಯಾರಂಟಿ ಯೋಜನೆ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಮುಖಂಡರಾದ ಹೇಮನಾಥ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಅಬ್ದುಲ್ ರಹಿಮಾನ್ ಆಝಾದ್, ಅಮಲ ರಾಮಚಂದ್ರ ಉಪಸ್ಥಿತರಿದ್ದರು.