
ಸುಳ್ಯ:ಕಳೆದ ಮೂರು ತಿಂಗಳಿನಿಂದ ಸಂಬಳ ದೊರೆಯದ ಹಿನ್ನಲೆಯಲ್ಲಿ ಸುಳ್ಯ ಸಾರ್ವಜನಿಕ ಆಸ್ಪತ್ರೆಯ ಡಿಗ್ರೂಪ್ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ ಇದರಿಂದ ಸುಳ್ಯ ಸರಕಾರಿ ಆಸ್ಪತ್ರೆಯ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ೨೦ ಮಂದಿ ಡಿಗ್ರೂಪ್ ನೌಕರರಿಗೆ ಮಾರ್ಚ್, ಎಪ್ರಿಲ್, ಮೇ ತಿಂಗಳ ಸಂಬಳ ಬಂದಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಏಜೆನ್ಸಿಗಳು ಸಂಬಳ ಪಾವತಿ ಮಾಡುತ್ತದೆ. ಏಜೆನ್ಸಿಗಳಿಗೆ ಸರಕಾರದಿಂದ ಹಣ ಪಾವತಿಸಲಾಗುತ್ತದೆ. ಸರಕಾರದಿಂದ ಕಳೆದ ಕೆಲವು ತಿಂಗಳಿನಿಂದ ಏಜೆನ್ಸಿಗೆ ಹಣ ಪಾವತಿಯಾಗಲು ವಿಳಂಬ ಆಗಿರುವ ಕಾರಣ ನೌಕರರಿಗೆ ಸಂಬಳ ಆಗಿಲ್ಲ ಎಂದು ಹೇಳಲಾಗಿದೆ.
ಆಸ್ಪತ್ರೆ ವ್ಯವಸ್ಥೆ ಅಸ್ತವ್ಯಸ್ತ:
ಆಸ್ಪತ್ರೆಯ ಸ್ವಚ್ಚತೆ, ತುರ್ತು ಚಿಕಿತ್ಸೆ, ರೋಗಿಗಳಿಗೆ ಅಡುಗೆ ತಯಾರಿ, ರೋಗಿಗಳನ್ನು ಆಸ್ಪತ್ರೆಯ ವಾರ್ಡ್, ಆಪರೇಷನ್ ಥಿಯೇಟರ್ ಮತ್ತಿತರ ಕಡೆಗಳಿಗೆ ಕರೆದೊಯ್ಯುವುದು, ಪೋಸ್ಟ್‌ಮಾರ್ಟಮ್ ಮತ್ತಿತರ ಕೆಲಸಗಳಿಗೆ ೨೪ ಗಂಟೆಯೂ ಡಿಗ್ರೂಪ್ ನೌಕರರ ಸೇವೆ ಆಸ್ಪತ್ರೆಯಲ್ಲಿ ಬೇಕಾಗುತ್ತದೆ. ಇದೀಗ ೩ ದಿನಗಳಿಂದ ಡಿಗ್ರೂಪ್ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರ ಹೂಡಿರುವ ಕಾರಣ ಆಸ್ಪತ್ರೆಯ ದೈನಂದಿನ ಕೆಲಸ ಕಾರ್ಯಗಳು ತಾಳ ತಪ್ಪಿದೆ. ಡಿಗ್ರೂಪ್ ನೌಕರರ ಗೈರು ಹಾಜರಿಯಿಂದ ೩ ದಿನಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ದೈನಂದಿನ ಕೆಲಸ ಕಾರ್ಯಗಳಿಗೆ ಸಮಸ್ಯೆ ಉಂಟಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕರುಣಾಕರ ಕೆ.ವಿ.ತಿಳಿಸಿದ್ದಾರೆ.
ಮಂಜೂರು ಹುದ್ದೆ ೩೨:ನೇಮಕಾತಿ ಒಂದೂ ಇಲ್ಲ:
ಸುಳ್ಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು ೩೨ ಡಿಗ್ರೂಪ್ ನೌಕರರ ಹುದ್ದೆ ಮಂಜೂರಾಗಿದೆ. ಆದರೆ ಸರಕಾರದಿಂದ ನೇಮಕಾತಿ ಸಂಖ್ಯೆ ಶೂನ್ಯ. ಕಳೆದ ೧೫-೨೦ ವರ್ಷಗಳಿಂದ ಸರಕಾರದಿಂದ ನೇಮಕಾತಿ ನಡೆದಿಲ್ಲ. ಹೊರಗುತ್ತಿಗೆ ಆಧಾರದಲ್ಲಿಯೇ ಡಿಗ್ರೂಪ್ ನೌಕರರ ನೇಮಕಾತಿ ನಡೆದಿದೆ. ಸದ್ಯ ೬ ಪುರುಷರು ಹಾಗೂ ೧೪ ಮಂದಿ ಮಹಿಳೆಯರು ಸೇರಿ ೨೦ ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.