
ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅವರು ಮೇ ೨೮ ಮತ್ತು ೨೯ರಂದು ಮಂಗಳೂರಿಗೆ ಆಗಮಿಸಲಿದ್ದು, ಅಮ್ಮ ಮಂಗಳೂರಿನಲ್ಲಿ ಜೀವನೋಲ್ಲಾಸದ ಸಂಭ್ರಮಾಚರಣೆ- ಅಮೃತ ಸಂಗಮ ೨೦೨೬ ಕಾರ್ಯಕ್ರಮ ನಗರದ ಬೋಳೂರಿನ ಅಮೃತ ವಿದ್ಯಾಲಯಂ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಮಾತಾ ಅಮೃತಾನಂದಮಯಿ ಸೇವಾ ಸಮಿತಿ ಮಂಗಳೂರು ಹಾಗೂ ಅಮೃತ ಸಂಗಮ ೨೦೨೬ ಆಯೋಜನಾ ಸಮಿತಿ ಅಧ್ಯಕ್ಷ ಸುರೇಶ್ ಅಮೀನ್ ಹೇಳಿದರು.ಅವರು ಸೋಮವಾರ ನಗರದ ಬೋಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಾತಾ ಅಮೃತಾನಂದಮಯಿ ದೇವಿ ಅವರು ೭ ವರ್ಷಗಳ ನಂತರ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಅಮ್ಮನವರಿಗೆ ಭವ್ಯವಾದ ಸ್ವಾಗತ ನೀಡಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ೨೫ನೇ ವರ್ಷದ ಸಂಭ್ರಮಾಚರಣೆ ಎಂಬ ವಿಶೇಷತೆ ಹೊಂದಿರುವುದರಿಂದಲೂ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳಿಗೆ ಅಮ್ಮನವರಿಂದ ಚಾಲನೆ ದೊರಕಿಸಲಾಗುತ್ತದೆ ಎಂದರು.
ಮೇ ೨೮ರಂದು ಅಮೃತಸಂಗಮ ಯಜ್ಞಶಾಲೆಯಲ್ಲಿ ಬೆಳಗ್ಗೆ ೫.೪೫ಕ್ಕೆ ಲಲಿತಾ ಸಹಸ್ರನಾಮ ಅರ್ಚನೆ, ೭.೩೦ಕ್ಕೆ ರಾಹು ದೋಷ ನಿವಾರಾಣಾ ಪೂಜೆ, ೧೦.೩೦ಕ್ಕೆ ಅಮ್ಮನ ಸತ್ಸಂಗ, ಭಜನೆ, ಧ್ಯಾನ, ವೈಯಕ್ತಿಕ ದರ್ಶನ ಅಮೃತಾಲಿಂಗನ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಬೆಳಗ್ಗೆ ೫.೩೦ಕ್ಕೆ ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ೯.೩೦ಕ್ಕೆ ಮಹಾ ಮೃತ್ಯುಂಜಯ ಹೋಮ, ಸಂಜೆ ೫ಕ್ಕೆ ಮಹಾ ಸುದರ್ಸನ ಹೋಮ, ೬ಕ್ಕೆ ಅಲಂಕಾರ ಪೂಜೆ, ೭ಕ್ಕೆ ದೇವಿ ಪೂಜೆ (ಭಗವತಿ ಸೇವೆ), ಉದಯಾಸ್ತಮಾನ ಪೂಜೆ ಪ್ರಸಾದ ಸಂಜೆಯ ಆರತಿಯ ನಂತರ, ಮೇ ೨೯ರಂದು ಅಮೃತ ಸಂಗಮ ಯಜ್ಞಶಾಲೆಯಲ್ಲಿ ಬೆಳಗ್ಗೆ ೫.೪೫ಕ್ಕೆ ಲಲಿತಾ ಸಹಸ್ರನಾಮ ಅರ್ಚನೆ, ೭.೩೦ಕ್ಕೆ ಶನಿ ದೋಷ ನಿವಾರಣಾ ಪೂಜೆ, ೧೦.೩೦ಕ್ಕೆ ಅಮ್ಮನ ಸತ್ಸಂಗ, ಭಜನೆ, ಧ್ಯಾನ, ವೈಯಕ್ತಿಕ ದರ್ಶನ, ಅಮೃತಾಲಿಂಗನ, ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರದಲ್ಲಿ ಬೆಳಗ್ಗೆ ೫.೩೦ಕ್ಕೆ ಮಹಾಗಣಪತಿ ಹೋಮ, ನವಗ್ರಹ ಶಾಂತಿ ಹೋಮ, ೯.೩೦ಕ್ಕೆ ಮಹಾ ಧನ್ವಂತರಿ ಹೋಮ, ಸಂಜೆ ೫ಕ್ಕೆ ಮಹಾ ಸುದರ್ಶನ ಹೋಮ, ೬ಕ್ಕೆ ಅಲಂಕಾರ ಪೂಜೆ, ೭ಕ್ಕೆ ದುರ್ಗಾಪೂಜೆ ನಡೆಯಲಿದೆ ಎಂದರು.
ಮೇ ೨೮ರಂದು ಬೆಳಗ್ಗೆ ೧೦.೩೦ಕ್ಕೆ ಸಮಾಜಮುಖಿ ಮಾನವೀಯ ಸೇವಾ ಯೋಜನೆಗಳ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀನ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ್ ಜೋಷಿ, ಕೇಂದ್ರದ ವಿದ್ಯುತ್ ಸಚಿವಾಲಯದ ರಾಜ್ಯ ಸಚಿವ ಶ್ರೀಪಾದ್ ಯೆಸ್ಸೋ ನಾಯಕ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಅಮ್ಮನವರ ದರ್ಶನ ಪಡೆಯಲು ಬಯಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಟೋಕನ್ ವ್ಯವಸ್ಥೆ ಇರುತ್ತದೆ. ಬೆಳಗ್ಗೆ ೯.೩೦ರ ಒಳಗೆ ಬಂದು ಕುಳಿತವರಿಗೆ ಟೈಮ್‌ಕಾರ್ಡ್ ನೀಡಲಾಗುತ್ತದೆ. ಅನಂತರ ದರ್ಶನ ಟೋಕನ್ (ಪುಟ್ಟ ಮಗುವಿಗೂ ಟೋಕನ್ ಕಡ್ಡಾಯ) ನೀಡಲಾಗುತ್ತದೆ. ಅಮ್ಮನವರ ಸತ್ಸಂಗ, ಧ್ಯಾನ, ಭಜನೆಯ ನಂತರ ಅಮ್ಮನವರ ದರ್ಶನ ಟೋಕನ್‌ನ ಸರದಿಯಂತೆ ಟೋಕನ್ ಹೊಂದಿದುವ ಪ್ರತಿಯೊಬ್ಬರಿಗೂ ಅಮ್ಮನವರು ಅಪ್ಪುಗೆಯ ಅಮೃತಾಲಿಂಗನದ ಅನಗ್ರಹ ದರ್ಶನ ನೀಡಲಿರುವರು ಎಂದು ಕಾರ್ಯಕ್ರಮದ ವಿವರ ನೀಡಿದರು.
ಸೇವಾ ಸಮಿತಿಯ ಪ್ರಮುಖರಾದ ಡಾ.ಜೀವರಾಜ್ ಸೊರಕೆ, ಸಿಎ ವಾಮನ ಕಾಮತ್, ಡಾ.ವಸಂತ ಕುಮಾರ್ ಪೆರ್ಲ, ಸಿಎ ರಾಮನಾಥ್, ದೇವದಾಸ್ ಪುತ್ರನ್ ಇದ್ದರು.





























