
ಪುತ್ತೂರು; ಪುತ್ತೂರು ಉಪ್ಪಿನಂಗಡಿ ನಡುವಣ ಹಾರಾಡಿ ರೈಲ್ವೇ ಮೇಲ್ಸೇತುವೆ ಕೆಳಗಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ಆರಂಭಗೊಂಡಿದ್ದು, ದಿನಂಪ್ರತಿ ನೂರಾರು ವಾಹನಗಳ ಓಡಾಟದ ಒತ್ತಡ ಇರುವ ಈ ರಸ್ತೆಯಲ್ಲಿ ಮುಂದಿನ ೧೫ ದಿನಗಳೊಳಗೆ ಲಘುವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದರು.
ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಮಂಗಳವಾರ ಕಾಮಗಾರಿ ವೀಕ್ಷಣೆಗೆ ಬಂದ ಶಾಸಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಬೊಳುವಾರು ಕಡೆಯಿಂದ ವೆಟ್‌ಮಿಕ್ಸ್ ಮತ್ತು ಕಾಂಕ್ರೀಟ್ ಹಾಕಿಕೊಂಡು ಬರಲು ಸೂಚಿಸಿದ ಅವರು ಗುರುವಾರದೊಳಗೆ ಎಲ್ಲಾ ಫ್ಲ್ಯಾಟ್‌ಫಾರ್ಮ್ ಆಗಬೇಕು. ೧೦ ದಿನದೊಳಗೆ ಕಾಂಕ್ರೀಟ್ ಹಾಕಬೇಕು. ಲಾರಿ ಇಲ್ಲ. ಸಿಮೆಂಟ್ ಇಲ್ಲ ಎಂಬ ನೆಪ ಹೇಳುವುದು ಬೇಡ. ತಕ್ಷಣ ಕೆಲಸ ಮುಗಿಯಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು. ಇಲ್ಲಿಯ ಕಾಮಗಾರಿ ಬಗ್ಗೆ ಜವಾಬ್ದಾರಿಯಿಂದ ನೋಡಿಕೊಳ್ಳಿ ಎಂದು ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜೇಶ್ ರೈ ಅವರಿಗೆ ಶಾಸಕರು ತಿಳಿಸಿದರು. ರಾತ್ರಿ ೮ ಗಂಟೆಯ ತನಕವೂ ಕೆಲಸ ಮಾಡಿ. ರಸ್ತೆ ಬಂದ್ ಆಗಿರುವುದರಿಂದ ವಾಹನಗಳ ತೊಂದರೆ ಇಲ್ಲ ಎಂದು ಅವರು ತಿಳಿಸಿದರು.
ಸ್ವೀಟ್ ತಿಂದ ಶಾಸಕರು…
ಅಡ್ಡ ಮತದಾನ ಮತ್ತು ಧರ್ಮಸ್ಥಳದಲ್ಲಿ ಆಣೆಪ್ರಮಾಣದ ವಿಚಾರದ ಪ್ರಶ್ನೆಗೆ ಉತ್ತರಿಸಿದ ಅವರು ಮನಸ್ಸು ಸರಿ ಇದ್ದರೆ ಆಣೆಪ್ರಮಾಣ ಎಲ್ಲ ಯಾಕೆ. ಮನಸ್ಸಿನಲ್ಲಿ ಕಳ್ಳತನ ಇಟ್ಟುಕೊಂಡು ಆಣೆಪ್ರಮಾಣ ಮಾಡಿದರೆ ಯಾವ ಪ್ರಯೋಜನವೂ ಇಲ್ಲ. ಮೊದಲು ಮನಸ್ಸಾಕ್ಷಿ ತಿದ್ದಿಕೊಳ್ಳಲಿ. ಅಭಿವೃದ್ಧಿಪರ ಕೆಲಸ ಮಾಡಲಿ. ಬಿಜೆಪಿ ಶಾಸಕರೂ ಅಡ್ಡ ಮತದಾನ ಮಾಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ತಮ್ಮ ಶಾಸಕರ ಮೇಲೆ ನಿಯಂತ್ರಣ ಇಲ್ಲ. ಶಾಸಕರು ಸ್ವೀಟ್ ಸಿಕ್ಕಿದೆ ಎಂದು ಅಡ್ಡ ಮತದಾನ ಮಾಡಿದ್ದಾರೆ ಎಂದ ಅವರು ಸ್ವೀಟ್ ಇದ್ದ ಕಡೆಗೆ ಇರುವೆಗಳು ಬರುತ್ತವೆ. ಹಾಗಾಗಿ ಕೆಲವು ಶಾಸಕರು ಬಂದಿದ್ದಾರೆ. ಆದರೆ ಕರಾವಳಿ ಶಾಸಕರು ಅಡ್ಡಮತದಾನ ಮಾಡಿದ ಬಗ್ಗೆ ಮಾಹಿತಿ ಇಲ್ಲ ಎಂದರು.
ಮೆಸ್ಕಾಂ ಸರ್ಕಾರದ ಅಧೀನದಲ್ಲಿರಬೇಕು..
ವಿದ್ಯುತ್ ಖಾಸಗೀಕರಣ ಮಾಡುವುದರ ವಿರುದ್ಧ ಮೆಸ್ಕಾಂನವರು ಪ್ರತಿಭಟನೆಗೆ ಮೊದಲು ತಮ್ಮ ಸೇವೆಯನ್ನು ಉತ್ತಮಗೊಳಿಸಬೇಕು. ವಿದ್ಯುತ್ ಅನ್ನೋದು ಅಂಗಡಿಯಿಂದ ಹಣ ಕೊಟ್ಟ ಸಾಮಾನು ತರುವ ಹಾಗೇ ಇರುವ ವ್ಯವಸ್ಥೆ. ವಿದ್ಯುತ್ ಸಂಪರ್ಕ ಪಡೆಯಲು ಜನಸಾಮಾನ್ಯರಿಗೆ ೨೫ ಕಾನೂನು ರೂಪಿಸಿದ್ದಾರೆ. ಮೊದಲು ಇಂತಹ ಅನವಶ್ಯಕ ನಿಮಯಗಳಿಂದ ಹೊರಬನ್ನಿ. ಕೆಲ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ ಮೂರು ದಿನಗಳಾದರೂ ಸಮಸ್ಯೆ ಸರಿಯಾಗುವುದಿಲ್ಲ. ಫೋನ್ ಮಾಡಿದರೆ ಸ್ಪಂಧನ ಇಲ್ಲ. ಮೊದಲು ಜನರ ಪೋನ್ ತೆಗೆಯುವುದನ್ನು ಕಲಿಯಿರಿ ಎಂದು ಗರಂ ಆಗಿ ಹೇಳಿದರು. ಜನರಿಗೆ ಉತ್ತ ಸೇವೆ ನೀಡಿದರೆ ಖಾಸಗೀಕರಣ ಯಾಕಾಗುತ್ತದೆ ಎಂದು ಪ್ರಶ್ನಿಸಿದ ಅವರು ಜನರಿಗೆ ತೊಂದರೆಯಾಗದಂತೆ ಉತ್ತಮ ಸೇವೆ ಕೊಡಿ. ಸರ್ಕಾರದ ಹಣ ಹೇಗಿದ್ದರೂ ನಡೆಯುತ್ತದೆ ಎಂಬ ಮನೋಭಾವ ಬಿಟ್ಟುಬಿಡಿ. ಸರ್ಕಾರದ ಅಧೀನದಲ್ಲಿಯೇ ಮೆಸ್ಕಾಂ ಇರಬೇಕು ಎಂಬುವುದು ನನ್ನ ಅಭಿಪ್ರಾಯ. ಮೆಸ್ಕಾಂ ಮಂದಿಗೆ ಸರ್ಕಾರ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಆದರೆ ನಿಮ್ಮ ಸೇವಾಕಾರ್ಯತತ್ಪರತೆ ಹೆಚ್ಚಾಗಬೇಕು ಎಂದರು.
ಚಾಲಕನ ಮೇಲೆ ಶಾಸಕರು ಗರಂ
ರಸ್ತೆ ಮಧ್ಯೆ ಕಾರು ನಿಲ್ಲಿಸಿದ್ದ ತಮ್ಮದೇ ಕಾರಿನ ಚಾಲಕನನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಕಾಮಗಾರಿ ವೀಕ್ಷಣೆ ಸಂದರ್ಭ ನಡೆಯಿತು. ರಸ್ತೆಯ ಓಡಾಟಕ್ಕೆ ತೊಂದರೆಯಾಗುತ್ತಿದ್ದ ಎಂಎಲ್ ಎ ಕಾರು ರಸ್ತೆ ಮಧ್ಯೆ ಇರುವುದನ್ನು ಕಂಡು ಕಾರು ತೆಗಿ ಮಾರಾಯ. ಎಂಎಲ್‌ಎ ಕಾರಾದರೆ ರಸ್ತೆ ಮಧ್ಯೆ ನಿಲ್ಲಿಸಬೇಕಾ.. ಡ್ರೈವರ್ ಇಲ್ವಾ ಅದರಲ್ಲಿ ದೆಪ್ಯರೆ ಪನ್ಲೆ ಆಯನ್ ಎಂದು ಗರಂ ಆದರು.


































