
ಸಂಜೆವಾಣಿ ವಾರ್ತೆ
ಬಳ್ಳಾರಿ, ಡಿ.10:ಇಂದು ಬಳ್ಳಾರಿಯಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ, ಧಾರವಾಡದಲ್ಲಿ ಅಪ್ರಜಾ ತಾಂತ್ರಿಕವಾಗಿ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.
ಉದ್ಯೋಗಾಂಕ್ಷಿಗಳ ಬೇಗುದಿಗೆ ಇಲ್ಲಿಯವರೆಗೂ ಕಿಂಚಿತ್ತೂ ಸ್ಪಂದಿಸದಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರವು ಇಂದು ಬೆಳಗ್ಗೆಯಿಂದಲೇ ಯಾವುದೇ ನೋಟೀಸ್ ನೀಡದೇ, ಧರಣಿಗೆ ಸಜ್ಜಾಗುತ್ತಿದ್ದ ಸಮಯದಲ್ಲೇ ಉದ್ಯೋಗಾಕಾಂಕ್ಷಿಗಳನ್ನು ಏಕಾಏಕಿ ಬಂಧಿಸಿರುವ ಕ್ರಮವನ್ನು ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿಯು ಉಗ್ರವಾಗಿ ಖಂಡಿಸುತ್ತದೆ. ಇದು ಜನತಂತ್ರವನ್ನು ದಮನ ಮಾಡಿರುವ ಅತ್ಯಂತ ಹೀನಾಯ ನಡೆಯಾಗಿದೆ.
ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಕನಿಷ್ಠ ಪ್ರತಿಭಟನೆಯ ಹಕ್ಕು ಲಭ್ಯವಿಲ್ಲ ಎಂದು ಇದರಿಂದ ಜಗಜ್ಜಾಹೀರಾಗಿದೆ.
ಹಲವು ತಿಂಗಳುಗಳಿಂದ ಖುದ್ದಾಗಿ ಮುಖ್ಯಮಂತ್ರಿಗಳ ಭೇಟಿಗೆ ಅವಕಾಶ ಕೇಳುತ್ತಲೇ ಇದ್ದರೂ, ಮುಖ್ಯ ಕಾರ್ಯದರ್ಶಿಗೆ ಉದ್ಯೋಗಾಕಾಂಕ್ಷಿಗಳ ಹಕ್ಕೊತ್ತಾಯಗಳ ಆಗ್ರಹಪತ್ರವನ್ನು ತಲುಪಿಸಿದ್ದರೂ ಸಹ ಕನಿಷ್ಠ ಮಟ್ಟದ ಸ್ಪಂದನೆಯನ್ನೂ ನೀಡದೆ, ಯಾವುದೇ ಬಾಧ್ಯತೆಯನ್ನು ತೋರದೆ ಸರ್ಕಾರವು ಉದ್ಯೋಗಾಂಕ್ಷಿಗಳನ್ನು ಬಂಧಿಸಿ ರಾಜ್ಯವನ್ನು ಪೊಲೀಸ್ ರಾಜ್ಯವನ್ನಾಗಿಸಿದೆ.
ಇದು ಅತ್ಯಂತ ಯುವಜನ ವಿರೋಧಿ ಕ್ರಮವಷ್ಟೇ ಅಲ್ಲ, ಯುವಜನರ ಬವಣೆಗೆ ಕವಡೆ ಕಾಸಿನ ಕಿಮ್ಮತ್ತನ್ನು ನಾವು ನೀಡುವುದಿಲ್ಲ, ಅವರು ನಮಗೆ ಕೇವಲ ಮತಬ್ಯಾಂಕ್ ಅಷ್ಟೇ ಎಂಬ ಕಾಂಗ್ರೆಸ್ ಸರ್ಕಾರದ ನಿಲುವಿಗೆ ಇನ್ನೊಂದು ಸಾಕ್ಷಿಯನ್ನು ಒದಗಿಸಿದೆ.
ಉದ್ಯೋಗದ ಕನಿಷ್ಠ ಹಕ್ಕು ಕೇಳುವುದೇ ಕಾಂಗ್ರೆಸ್ ಆಡಳಿತದಲ್ಲಿ ಅಪರಾಧ ಎಂದು ಸರ್ಕಾರವು ಬಗೆಯುತ್ತಿದೆ. ಒಳಮಿಸಲಾತಿಯ ಕುಂಟು ನೆಪವನ್ನು ಮುಂದಿಟ್ಟುಕ್ಕೊಂಡು ಹಲವು ತಿಂಗಳುಗಳಿಂದ ನೇಮಕಾತಿಯನ್ನು ವಿಳಂಬ ಮಾಡುತ್ತಲೇ ಇರುವ ಕಾಂಗ್ರೆಸ್ ಸರ್ಕಾರವು ಇಂದು ಕಡು ಜನವಿರೋಧಿ ಕ್ರಮವನ್ನು ತೆಗೆದುಕೊಂಡು ಜನತಂತ್ರದ ಹರಣ ಮಾಡಿದೆ.
ಸರ್ಕಾರದ ಈ ದಮನಕಾರಿ ಕ್ರಮಕ್ಕೆ ಉದ್ಯೋಗಾಕಾಂಕ್ಷಿ ಗಳು ಬೆದರುವುದಿಲ್ಲ ಮತ್ತು ಬೇಡಿಕೆಗಳನ್ನು ಈಡೇರಿಸುವವರೆಗೆ ಹೋರಾಟವು ಮುಂದುವರೆಯುತ್ತದೆ ಮತ್ತು ಇನ್ನು ಬಲಿಷ್ಠವಾಗುತ್ತದೆ ಹಾಗೂ ಅದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಬಳ್ಳಾರಿ ಅಭಿಪ್ರಾಯ ಪಡುತ್ತದೆ.
ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕರಾದ ಸಿದ್ದಲಿಂಗ ಬಾಗೇವಾಡಿ, ಸಹ ಸಂಚಾಲಕರಾದ ಭವಾನಿ ಶಂಕರ್ ಎಸ್ ಗೌಡ, ಚನ್ನಬಸವ ಜಾನೇಕಲ್, ಎಐಡಿವೈಓ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್, ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಣ ಜಡಗಣ್ಣವರ್, ಎಐಡಿವೈಓ ರಾಜ್ಯ ಉಪಾಧ್ಯಕ್ಷರಾದ ಜಗನ್ನಾಥ ಎಸ್. ಎಚ್, ಉದ್ಯೋಗಾಕಾಂಕ್ಷಿ ಪಾಲಾಕ್ಷ.ಕೆ ಮತ್ತಿತರರನ್ನು ಬಂಧಿಸಲಾಗಿದೆ. ಅವರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದೂ ಸರ್ಕಾರವನ್ನು ಒತ್ತಾಯಿಸುತ್ತದೆ ಹಾಗೂ ಸರ್ಕಾರದ ಈ ದಬ್ಬಾಳಿಕೆಯ ನಡೆಯನ್ನು ಎದುರಿಸಿ ಹೋರಾಟ ಕಟ್ಟುತ್ತಿರುವ ಉದ್ಯೋಗಾಕಾಂಕ್ಷಿ ಯುವಜನತೆಯನ್ನು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯು ಅಭಿನಂದಿಸುತ್ತದೆ ಮತ್ತು ನಮ್ಮ ಎಲ್ಲ ನ್ಯಾಯಯುತ ಬೇಡಿಕೆಗಳು ಈಡೇರುವತನಕ ಈ ಹೋರಾಟದ ಕಾವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡುತ್ತದೆ.




























