
ಸಂಜೆವಾಣಿ ವಾರ್ತೆ
ಹೊಸಪೇಟೆ.ಅ.24 ವಿಶ್ವ ಪಾರಂಪರಿಕ ತಾಣವಾದ ಹಂಪಿ, ಕಮಲಾಪುರ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧೆಡೆ ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸುವ ಹೋಂ ಸ್ಟೇ ಮಾಲೀಕರು ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು, ಅಗತ್ಯ ಅನುಮೋದನೆ ಪಡೆಯಬೇಕು. ನೋಂದಣಿ ಪ್ರಮಾಣಪತ್ರ ಪಡೆಯದೆ ಅನಧಿಕೃತವಾಗಿ ಹೋಂ ಸ್ಟೇ ನಡೆಸುವವರ ವಿರುದ್ಧ ಕೆ.ಟಿ.ಟಿ.ಎಫ್-2015 ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನಿಕೇರಿ ಎಚ್ಚರಿಕೆ ನೀಡಿದ್ದಾರೆ.
ಪ್ರವಾಸಿಗರ ಅನುಕೂಲಕ್ಕಾಗಿ ಹೋಂ ಸ್ಟೇ ಪ್ರಾರಂಭಿಸಲು ಅಥವಾ ಸ್ಥಾಪಿಸಲು ನಿಯಮಾನುಸಾರ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಹಂಪಿ, ಕಮಲಾಪುರ ಹಾಗೂ ಜಿಲ್ಲೆಯ ಇತರೆ ಪ್ರದೇಶಗಳಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇ ಮಾಲೀಕರು, ತಮ್ಮ ವಸತಿ ಸೌಲಭ್ಯಗಳನ್ನು ಕಾನೂನುಬದ್ಧವಾಗಿ ಮುಂದುವರಿಸಲು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯಬೇಕು.
ಹೋಂ ಸ್ಟೇ ನೋಂದಣಿ ಮತ್ತು ಅರ್ಜಿ ಸಲ್ಲಿಕೆಗೆ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಜಾಲತಾಣವಾದ hಣಣಠಿs://ಠಿoಡಿಣಚಿಟ.ಞಚಿಡಿಟಿಚಿಣಚಿಞಚಿಣouಡಿism.oಡಿg ಮೂಲಕ ಅವಕಾಶ ಕಲ್ಪಿಸಲಾಗಿದೆ. ಮಾಲೀಕರು ಈ ಅವಕಾಶವನ್ನು ಬಳಸಿಕೊಂಡು ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ನೋಂದಣಿ ಪ್ರಮಾಣಪತ್ರ ಪಡೆಯಬೇಕು.
ನೋಂದಣಿ ಪ್ರಮಾಣಪತ್ರ ಪಡೆಯದೆ ಹೋಂ ಸ್ಟೇ ನಡೆಸುತ್ತಿರುವವರ ವಿರುದ್ಧ ಈಗಾಗಲೇ ಹಲವು ಬಾರಿ ನೋಟಿಸ್ ನೀಡುವ ಮೂಲಕವೂ ಎಚ್ಚರಿಕೆ ನೀಡಲಾಗಿದೆ. ನೋಂದಣಿ ಪಡೆಯುವವರೆಗೆ ಹೋಂ ಸ್ಟೇಗಳನ್ನು ಸ್ಥಗಿತಗೊಳಿಸಬೇಕು ಹಾಗೂ ಪ್ರವಾಸಿಗರಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡಬಾರದು. ಆದಾಗ್ಯೂ, ಕೆಲವು ಹೋಂ ಸ್ಟೇ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಕೊಠಡಿಗಳನ್ನು ಒದಗಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ, ಆನ್ಲೈನ್ ಮೂಲಕ ಕೊಠಡಿಗಳ ಕಾಯ್ದಿರಿಸುವಿಕೆಗೆ ಅವಕಾಶ ಕಲ್ಪಿಸಿ ವಸತಿ ಸೌಲಭ್ಯ ಒದಗಿಸುವುದು ಕಾನೂನುಬಾಹಿರವಾಗಿದ್ದು, ಅಂತಹವರ ವಿರುದ್ಧವೂ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕವಿತಾ ಎಸ್. ಮನ್ನಿಕೇರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
























