ಹೊಸ ನೀತಿ ರದ್ದುಪಡಿಸಿ ಹಳೆ ನೀತಿ ಜಾರಿಗೆ ತರುವಂತೆ ರೈತಸಂಘ ಆಗ್ರಹ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಡಿ.19:
ರಾಜ್ಯ ಸರ್ಕಾರ ಜಾರಿಗೆ ತಂದಿರುವ ನೂತನ ಅಕ್ರಮ-ಸಕ್ರಮ ವಿದ್ಯುತ್ ಪಂಪ್ ಸೆಟ್ ನೀತಿಯನ್ನು ರದ್ದುಪಡಿಸಿ ಹಳೆಯ ನೀತಿಯನ್ನೆ ಜಾರಿಗೆ ತರಬೇಕು ಮತ್ತು ತಾಲೂಕಿನ ರೈತರಿಗೆ ಬೆಳಗಿನ ಜಾವ 4.45 ರ ಸಮಯದಲ್ಲಿ ನೀಡುತ್ತಿರುವ ವಿದ್ಯುತ್ ಸಮಯವನ್ನು ಬೆಳಿಗಿನ 06 ಘಂಟೆಗೆ ಬದಲಿಸಿಬೇಕೆಂದು ತಾಲೂಕು ರೈತಸಂಘದ ಕಾರ್ಯಕರ್ತರು ಆಗ್ರಹಿಸಿದರು.
ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಸೆಸ್ಕಾಂ ಉಪ ವಿಭಾಗೀಯ ಕಛೇರಿಯ ಆವರಣದಲ್ಲಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ತ್ರೈಮಾಸಿಕ ಜನಸಂಪರ್ಕ ಸಭೆಯಲ್ಲಿ ರೈತರು ತಾಲೂಕಿನ ವಿದ್ಯುತ್ ಸಮಸ್ಯೆಯ ಬಗ್ಗೆ ಮಾತನಾಡಿದರು.


ಸಭೆಯಲ್ಲಿ ಮಾತನಾಡಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಈ ಹಿಂದಿನ ಸರ್ಕಾರ ಅಕ್ರಮ ವಿದ್ಯುತ್ ಸಂಪರ್ಕಗಳ ಸಕ್ರಮಕ್ಕೆ ಪ್ರತಿ ಪಂಪ್ ಸೆಟ್ ಗೆ 14 ಸಾವಿರ ರೂ ನಿಗಧಿ ಪಡಿಸಿತ್ತು. ಆದರೆ ಈಗಿನ ಕಾಂಗ್ರೆಸ್ ಅದನ್ನು 25 ಸಾವಿರ ರೂಗಳಿಗೆ ಹೆಚ್ಚಿಸಿ ರೈತರ ಸುಲಿಗೆಗೆ ನಿಂತಿದೆ. ರೈತರು ಬೆಳೆಯುವ ಯಾವುದೇ ಬೆಳೆಗಳ ಬೆಲೆ ಹೆಚ್ಚಾಗಿಲ್ಲ. ಆದರೆ ಸರ್ಕಾರ ವಿದ್ಯುತ್ ಬೆಲೆ ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳ ಮಾಡಿ ರೈತರ ಬದುಕಿನ ಮೇಲೆ ಬರೆ ಎಳೆಯುತ್ತಿದೆ. ನಮಗೆ ರಾಜ್ಯ ಸರ್ಕಾರದ ಯಾವುದೇ ಬಿಟ್ಟಿ ಭಾಗ್ಯಗಳ ಅಗತ್ಯವಿಲ್ಲ. ಅದಕ್ಕೆ ಬದಲಾಗಿ ರೈತರ ಪಂಪ್ ಸೆಟ್ಟುಗಳಿಗೆ ಉಚಿತ ವಿದ್ಯುತ್ ಸಂಪರ್ಕ ಭಾಗ್ಯ ನೀತಿ ಜಾರಿಗೆ ತಂದು ನಿತ್ಯ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿದರು.


ರೈತರ ಪಂಪ್ ಸೆಟ್ಟುಗಳಿಗೆ ನಿತ್ಯ ರಾತ್ರಿ 8.45 ರಿಂದ 11.45 ಮತ್ತು ಬೆಳಗಿನ ಜಾವ 4.45 ರಿಂದ 8.45 ವರೆಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ತಾಲೂಕಿನಾದ್ಯಂತ ಚಿರತೆಗಳ ಹಾವಳಿ ಮಿತಿ ಮೀರಿದ್ದು ರೈತರು ಜೀವ ಭಯದಲ್ಲಿ ಹೊಲ ಗದ್ದೆಗಳಿಗೆ ಹೋಗಬೇಕಾದ ಸ್ಥಿತಿಯಿದೆ.


ರಾತ್ರಿ 11.45 ಕ್ಕೆ ಮನೆಗೆ ಬರುವ ರೈತ ಮತ್ತೆ ಬೆಳಗಿನ ಜಾವ 4.45 ರ ವೇಳೆಗೆ ತನ್ನ ಹೊಲ ಗದ್ದೆಗಳಿಗೆ ನೀರು ಹಾಯಿಸಲು ಹೋಗಬೇಕಾದ ಸ್ಥಿತಿಯಿದೆ. ಹಗಲು ರಾತ್ರಿ ರೈತ ತನ್ನ ಜಮೀನಿನಲ್ಲಿಯೇ ಉಳಿಯ ಬೇಕಾದ ರೈತ ಸರ್ಕಾರದ ವಿದ್ಯುತ್ ಪೂರೈಕೆ ನೀತಿಯಿಂದ ನೆಮ್ಮದಿಯಾಗಿ ಮಲಗಲು ಅವಕಾಶ ಇಲ್ಲದಂತಾಗಿದೆ. ಸೆಸ್ಕಾಂ ತನ್ನ ವಿದ್ಯುತ್ ಪೂರೈಕೆ ನೀತಿಯನ್ನು ಬದಲಿಸಿ ಹಗಲು ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವಂತೆ ಪುಟ್ಟೇಗೌಡ ಆಗ್ರಹಿಸಿದರು.


ತಾಲೂಕಿನ ಕೆಲವು ಕಡೆ ರೈತರ ಜಮೀನಿನಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು ಇದರಿಂದ ರೈತರ ವ್ಯವಸಾಯಕ್ಕೆ ಅಡಚಣೆಯಾಗಿದೆ. ರೈತರ ವ್ಯವಸಾಯಕ್ಕೆ ಅಡಚಣೆಯಾಗುತ್ತಿರುವ ಕಂಬಗಳನ್ನು ಸ್ಥಳಾಂತರಿಸಬೇಕು. ಕೆಲವು ಕಡೆ ಹೊಸ ವಿದ್ಯುತ್ ಲೈನ್ ಅಳವಡಿಕೆಗೆ ಟೆಂಡರ್ ನೀಡಿದ್ದು ಗುತ್ತಿಗೆದಾರರು ಹೊಸ ಲೈನ್ ಹಾಕುವ ಬದಲು ಹಳೆಯ ಲೈನುಗಳನ್ನೆ ಹಾಕಿ ಇಲಾಖೆಗೆ ವಂಚನೆ ಮಾಡುತ್ತಿದ್ದಾರೆ. ತೋಟದ ಮನೆಗಳಲ್ಲಿ ವಾಸಿಸುತ್ತಿರುವ ರೈತ ಕುಟುಂಬಗಳಿಗೆ ವಿಳಂಭ ಮಾಡದೆ ವಿದ್ಯುತ್ ಸಂಪರ್ಕ ನೀಡಿ ಎಂದು ರೈತರು ಸಭೆಯಲ್ಲಿ ಆಗ್ರಹಿಸಿದರು.
ಸೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾತನಾಡಿ ತಾಲೂಕಿನಾದ್ಯಂತ ಕಾಮಗಾರಿ ನಿರ್ವಹಣೆಯ ಸಂದರ್ಭದಲ್ಲಿ ಮಾತ್ರ ವಿದ್ಯುತ್ ತೆಗೆಯುತ್ತಿದ್ದು ಉಳಿದೆಡೆ ಯಾವುದೇ ಅಡಚಣೆಯಿಲ್ಲದೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.


ತಾಲೂಕಿನ ಕೃಷ್ಣಾಪುರದಲ್ಲಿರುವ ಅಲೆಮಾರಿ ಜನಾಂಗದವರು ನಿಯಮಾನುಸಾರ ನಿಗಮಕ್ಕೆ ನಿಗಧಿತ ಹಣ ಪಾವತಿಸಿದರೆ ಅವರಿಗೆ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.
ಅಲೆಮಾರಿ ಜನಾಂಗದ ಬೀದಿಗಳಿಗೆ ಅಗತ್ಯವಾದ ಬೀದಿ ದೀಪಗಳ ವ್ಯವಸ್ಥೆಯನ್ನು ಆಯಾ ಗ್ರಾಮ ಪಂಚಾಯತಿ ವತಿಯಿಂದ ಹಾಕಬೇಕು. ಅದಕ್ಕೂ ನಿಗಮಕ್ಕೂ ಯಾವುದೇ ಸಂಬಂಧವಿಲ್ಲ ತಾಲೂಕಿನಲ್ಲಿ ಸುಮಾರು 1710 ತೋಟದ ಮನೆಗಳಿದ್ದು ಇವುಗಳಿಗೆ ಎನ್.ಜೆ.ವೈ ಯೋಜನೆಯಡಿ 5-6 ಮನೆಗಳಿಗೆ ಒಂದು ಟಿ.ಸಿ ಯಂತೆ ಅಳವಡಿಕೆ ಮಾಡಿ ವಿದ್ಯುತ್ ಸಂಪರ್ಕ ನೀಡಲು ಯೋಜಿಸಿದ್ದು ತೋಟದ ಮನೆ ವಾಸಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸ್ವಯಂ ಕಾಮಗಾರಿಯಡಿಯಲ್ಲಿ ಕೆಲಸ ಮಾಡಿಸಿಕೊಳ್ಳಬೇಕು. ಅಕ್ರಮ-ಸಕ್ರಮ ನೀತಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು ಈ ಕುರಿತು ರೈತರ ವಿರೋಧವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದೆಂದರು.