ಹೊಸಪೇಟೆ ನಗರದ ಸಮಸ್ಯೆ ಪರಿಹರಿಸಲು ಸ್ಥಳೀಯ ಆಡಳಿತ ಕ್ರಮವಹಿಸಲುಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ.


ಸಂಜೆವಾಣಿ ವಾರ್ತೆ
ಹೊಸಪೇಟೆ(ವಿಜಯನಗರ), ಜೂ.19 : ಹೊಸಪೇಟೆ ನಗರದಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆ, ಯುಜಿಡಿ ಸಮಸ್ಯೆ ಸೇರಿದಂತೆ ಸ್ಥಳೀಯ ಸಂಪನ್ಮೂಲ ಕೃಢೀಕರಣವೂ ಸೇರಿದಂತೆ ಶೀಘ್ರವೇ ಸಮಸ್ಯಗಳನ್ನು ಪರಿಹರಿಸುವಂತೆ ಐದನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸಪೇಟೆ ನಗರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ 5ನೇ ರಾಜ್ಯ ಹಣಕಾಸು ಆಯೋಗದ ಸಭೆಯಲ್ಲಿ ಅವರು ಬುಧವಾರ ಮಾತನಾಡಿದರು. ನಗರದ ಎಲ್ಲ ವಾರ್ಡಗಳಿಗೆ ನಿಗಧಿತ ವೇಳೆಗೆ ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು. ಕುಡಿಯುವ ನೀರಿನ ಪೈಪ್‍ಲೈನ್‍ಗಳನ್ನು ವೈಜ್ಞಾನಿಕವಾಗಿ ಅಳವಡಿಸಬೇಕು. ಅಭಿವೃದ್ಧಿಗೆ ಆದ್ಯತೆ ನೀಡಬೇಕು,  ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅನಗತ್ಯ ಕ್ರಿಯಾ ಯೋಜನೆ ರೂಪಿಸಿ ಸರ್ಕಾರದ ಹಣ ದುರ್ಬಳಕೆ ಯಾಗದಂತೆ ಸೂಚಿಸಿದರು. 
ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್ ಮಾತನಾಡಿ, ಅಡಳಿತ ಸುಧಾರಣೆಗೆ ನಗರಸಭೆ ಅಧಿಕಾರಿಗಳಿಗೆ, ನೌಕರರಿಗೆ ಆಡಳಿತ ನಿರ್ವಹಣಾ ತರಬೇತಿಗಳನ್ನು ಕ್ರಮಬದ್ದವಾಗಿ ಆಯೋಜನೆ ಮಾಡಬೇಕು. ವೈಚಾರಿಕ ಮತ್ತು ವೈಜ್ಞಾನಿಕ ಆಡಳಿತಕ್ಕೆ ಪೂರಕವಾಗಿ ಆಡಳಿತ ಸಿಬ್ಬಂದಿಯನ್ನು ನೇಮಿಸಲು ವೃಂದ ನೇಮಕಾತಿಗಳಲ್ಲಿ ಅವಕಾಶ ಕಲ್ಪಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ನಿಗಧಿತ ವೇಳೆಗೆ ಕುಡಿಯುವ ನೀರನ್ನು ಒದಗಿಸಬೇಕಿದೆ. ಇನ್ನೂ ಕೆಲವು ವಾರ್ಡ್‍ಳಿಗೆ ನೀರು ಸರಬರಾಜು ಮಾಡಲು ಅನುದಾನ ಒದಗಿಸಬೇಕಿದೆ. ಅಂಗನವಾಡಿ ಮತ್ತು ಶಾಲಾ ಕಾಲೇಜುಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನ ಬೇಕಾಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ವಹಣೆ ಮಾಡಲು ಸರ್ಕಾರ ಸಂಬಂಧಿಸಿದ ಇಲಾಖೆಗಳ ಲೆಕ್ಕ ಶೀರ್ಷಿಕೆಗಳಿಂದ ಈ ವೆಚ್ಚಗಳನ್ನು ಅನುಪಾತದ ಮಾದರಿಯಲ್ಲಿ ಹಂಚಿಕೆ ಮಾಡಬೇಕು. ಹಣಕಾಸು ಆಯೋಗದ ಮುಂದೆ ವಿವಿಧ ಬೇಡಿಕೆಗಳು ಮತ್ತು ಸಲಹೆಗಳನ್ನು ಸಲ್ಲಿಸಿದರು.
ಪೌರಾಯುಕ್ತರಾದ ಸಿ.ಚಂದ್ರಪ್ಪ ಮಾತನಾಡಿ, 5ನೇ ರಾಜ್ಯ ಹಣಕಾಸು ಆಯೋಗದ ಮಾಹಿತಿಯನ್ನು ನೀಡಿ ನಗರದಲ್ಲಿ 35 ವಾರ್ಡ್‍ಳಿದ್ದು, ಪ್ರತಿ ವಾಡ್ರ್ಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದಾರೆ. ನಗರಸಭೆಯಲ್ಲಿ ಒಟ್ಟು 540 ಹುದ್ದೆಗಳಿವೆ. ಅವುಗಳಲ್ಲಿ 240 ಹುದ್ದೆಗಳು ಭರ್ತಿಯಾಗಿದ್ದು, ಪ್ರಸ್ತುತ 300 ಹುದ್ದೆಗಳು ಖಾಲಿ ಇವೆ. 156 ಖಾಯಂ ಪೌರಕಾರ್ಮಿಕರು ಹಾಗೂ ಹೊರಗುತ್ತಿಗೆಯಲ್ಲಿ 55 ಪೌರಕಾರ್ಮಿಕರು ಸೇರಿದಂತೆ ಒಟ್ಟು 211 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆಂದು ಮಾಹಿತಿ ನೀಡಿದರು.
ಸಮಾಲೋಚಕರು ಮಾತನಾಡಿ ಸರ್ಕಾರ ಹೊಸ ಜಿಲ್ಲಾ ರಚನೆಯ ನಂತರ ಹೊಸಪೇಟೆ ಜಿಲ್ಲಾ ಕೇಂದ್ರವಾಗಿದ್ದು ಹಿಂದೂಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕದ ಭಾಗವಾಗಿರುವುದರಿಂದ ಮೂಲಸೌಕರ್ಯ ಸೇರಿದಂತೆ ಕೊಳಚೆ ಪ್ರದೇಶವಾಗಿರುವುದು ಸೇರಿದಂತೆ ಪ್ರವಾಸಿ ತಾಣದ ಹೆಬ್ಬಾಗಿಲಾಗಿದೆ ಹೀಗಾಗಿ ಇಲ್ಲನ ಸಮಸ್ಯೆಗಳನ್ನು ಅರಿತು ಹೆಚ್ಚಿನ ಅನುದಾನಕ್ಕೆ ಶೀಫಾರಸ್ತು ಸಲ್ಲಿಸಲಾಗುವುದು ಎಂದರು.
ಸ್ಥಳೀಯ ಸರ್ಕಾರದಂತೆ ಕಾರ್ಯನಿರ್ವಹಿಸಬೇಕಾಗಿದ್ದು ತೆರಿಗೆ ಸಂಗ್ರಹ, ಉದ್ಯಮ ಪರವಾನಿಗೆ, ಕರವಸೂಲಿ ಸಮರ್ಪಕವಾಗಿ ಆಗಬೇಕು, ಖಾಸಗಿ ಸಹಭಾಗಿತ್ವದ ಯೋಜನೆಗಳನ್ನು ರೂಪಿಸುವ ಮೂಲಕ ನಗರಸಭೆಯ ಹೊರೆ ಕಡಿಮೆ ಮಾಡಲು ಸ್ಥಳೀಯ ಸರ್ಕಾರ ಮುಂದಾಗಬೇಕು ಎಂಬ ಸಲಹೆಯನ್ನು ಬಹುತೇಕ ಸಮಾಲೋಚಕರು ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ 5ನೇ ರಾಜ್ಯ ಹಣಕಾಸು ಆಯೋಗ ಸದಸ್ಯರಾದ ಮಹಮ್ಮದ್ ಸದಾವುಲ್ಲ, ಆರ್.ಎಸ್.ಫೋಂಡೆ, ಸಮಾಲೋಚಕರಾದ ಸುಪ್ರಸನ್ನ, ಕೆಂಪೇಗೌಡ, ಅಪ್ತ ಕಾರ್ಯದರ್ಶಿ ಏಲಕ್ಕಿ ಗೌಡ, ಜಿಲ್ಲಾ ಯೋಜನಾಕೋಶದ ನಿರ್ದೇಶಕ ಮನೋಹರ್, ನಗರಸಭೆ ಉಪಾಧ್ಯಕ್ಷ ರಮೇಶ್ ಗುಪ್ತ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಶಂಕ್ರಿ, ಪೌರಾಯುಕ್ತರಾದ ಸಿ.ಚಂದ್ರಪ್ಪ ಸೇರಿದಂತೆ ನಗರಸಭೆಯ ಎಲ್ಲಾ ಸದಸ್ಯರು ಸಿಬ್ಬಂದಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.