
ಸಂಜೆವಾಣಿ ವಾರ್ತೆ
ಹೊಸಪೇಟೆ(ವಿಜಯನಗರ),ಜೂ18: ಹೊಸಪೇಟೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ನೂತನವಾಗಿ 20 ಕೊಠಡಿಗಳ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಶೀಘ್ರ ಕ್ರಮವಹಿಸಲಾಗುವುದು, ಕಳಪೆ ಕಾಮಗಾರಿ, ಅನಗತ್ಯ ವಿಳಂಬ ನಿರ್ಲಕ್ಷ್ಯತನ ಸಹಿಸಲಾಗದು ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಿಕಿಹೊಳಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡಿದರು. ಪ್ರತಿ ಎರಡು ತಿಂಗಳಿಗೊಮ್ಮೆ ಪಿಡಬ್ಲೂಡಿ ಅಧಿಕಾರಿಗಳು ಅಯಾ ಶಾಸಕರ ನೇತೃತ್ವದಲ್ಲಿ ಕಾಮಗಾರಿಗಳ ಪ್ರಗತಿ, ಸ್ಥಳೀಯ ಸಮಸ್ಯೆಗಳ ಅವಲೋಕನ, ಅಗತ್ಯವಿರುವ ಕಾಮಗಾರಿಗಳ ಕ್ರಿಯಾಯೋಜನೆ ಕುರಿತು ಕಡ್ಡಾಯವಾಗಿ ಸಭೆ ನಡೆಸಿ ವರದಿ ಸಲ್ಲಿಸಬೇಕು. ಇಲಾಖೆಯ ಯಾವುದೇ ಕಾಮಗಾರಿಗಳು ಕಳಪೆ ಗುಣಮಟ್ಟ, ನಿರ್ಲಕ್ಷ್ಯತನ, ವಿಳಂಬ ಆಗದಂತೆ ಪೂರ್ಣಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕು. ಈಗಾಗಲೇ ರಾಜ್ಯದಲ್ಲಿ ಗಡಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ನೆರೆ ರಾಜ್ಯದ ರಸ್ತೆಗಳಿಗೂ, ನಮ್ಮ ರಾಜ್ಯದ ರಸ್ತೆಗಳಿಗೆ ಹೋಲಿಕೆ ಮಾಡದಂತೆ ಹೆಚ್ಚಿನ ಗುಣಮಟ್ಟದಲ್ಲಿ ರಸ್ತೆ ಅಭಿವೃದ್ಧಿಗೆ ಅನುದಾನ ಕಲ್ಪಿಸಲಾಗಿದೆ. ಜಿಲ್ಲೆಯ ಪಿಡಬ್ಲೂಡಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇಲ್ಲ. ಎಲ್ಲಾ ಎಇಇ, ಇಇ ಹೆಚ್ಚಿನ ಮುತುವರ್ಜಿ ವಹಿಸಿ ವಿಳಂಬ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಎಇಇ ನಿಮ್ಮ ಸ್ಥಳೀಯ ಶಾಸಕರೊಂದಿಗೆ ಉತ್ತಮ ಸಂವಹನದೊಂದಿಗೆ ಸಾಮಾನ್ಯ ಜನರ ಬೇಡಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ಕ್ಷೇತ್ರದ ಉಜ್ಜಿನಿ ಮತ್ತು ಗುಡೆಕೋಟೆಯಲ್ಲಿ ಪ್ರವಾಸಿ ಮಂದಿರ ನಿರ್ಮಾಣದ ಅಗತ್ಯವಿದೆ. ಹೊಸಹಳ್ಳಿ, ಇಮಾಡಪುರ, ಬಣವಿಕಲ್ಲು ಗ್ರಾಮದಲ್ಲಿ ಚತುಷ್ಪತ ರಸ್ತೆ ನಿರ್ಮಾಣ, ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಸೇರಿ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಟ್ಟು ಹೋಗಿರುವ ಸೇವಾ ರಸ್ತೆಗಳ ನಿರ್ಮಾಣ ಕಾರ್ಯ ನಡೆಯಬೇಕಿದೆ. ಜಿಲ್ಲೆಯಲ್ಲಿ ಡಿಎಂಎಫ್, ಕೆಎಂಆರ್‍ಸಿ ಹಾಗೂ ಕೆಕೆಆರ್‍ಡಿಬಿ ಯೋಜನೆಯಡಿ ಅನುದಾನ ಲಭ್ಯತೆ ಕಡಿಮೆ ಇದ್ದು, ರಾಜ್ಯ ಸರ್ಕಾರದ ಅನುದಾನದ ಅಗತ್ಯವಿದೆ. ಹೊಸಹಳ್ಳಿ ಹೋಬಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಶಾಲೆ ನಿರ್ಮಾಣ ಕಾರ್ಯ ನೆನಗುದಿಗೆ ಬಿದ್ದಿದೆ. ಅಧಿಕಾರಿಗಳು ತ್ವರಿತ ವೇಗ ನೀಡುವ ಮೂಲಕ ಪೂರ್ಣಗೊಳಿಸಲು ಅಗತ್ಯ ಅನುದಾನ ನೀಡಬೇಕಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳು ಅಪಘಾತಗೊಂಡು ಹಿಂಬದಿ ಸವಾರರ ಸಾವಿನ ಸಂಖ್ಯೆ ಹೆಚ್ಚಾಗಿದೆ. ವೈಜ್ಞಾನಿಕವಾಗಿ ರಸ್ತೆ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಾನಗಲ್ ಮೂಲಕ ಇಟಿಗಿ, ಕೊಟ್ಟೂರು, ಉಜ್ಜಿನಿ, ಗುಡೇಕೋಟೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದರು.
ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ, ಕೊಟ್ಟೂರು ನೂತನ ತಾಲೂಕಾದ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ ಪಿಡಬ್ಲೂಡಿ ಕಚೇರಿ ಆರಂಭಿಸಲು ಕ್ರಮ ವಹಿಸಬೇಕು. ಮಲ್ಲನಾಯಕನಹಳ್ಳಿ ಗ್ರಾಮದ ರಸ್ತೆ ಮಾರ್ಗಕ್ಕೆ ಅಂದಾಜು 2 ಕೋಟಿ ರೂಗಳ ಅನುದಾನ ನೀಡಬೇಕು.
ಮರಿಯಮ್ಮನಹಳ್ಳಿ-ಶಿವಮೊಗ್ಗ ಪಿಪಿಪಿ ರಸ್ತೆ;
ಮರಿಯಮ್ಮನಹಳ್ಳಿ- ಹಗರಿಬೊಮ್ಮನಹಳ್ಳಿ- ಹರಪನಹಳ್ಳಿ- ಹರಿಹರ- ಮಲೇಬೆನ್ನೂರು- ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಕೆಲಸವನ್ನು ಕೇಂದ್ರ ಕೈಬಿಟ್ಟ ಕಾರಣ ಪ್ರಸ್ತುತ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಇದನ್ನು ಖಾಸಗಿ ಸಹಭಾಗಿತ್ವದಲ್ಲಿ ರಸ್ತೆ ಅಭಿವೃದ್ದಿ ಮಾಡಿ ಶುಲ್ಕ ಸಂಗ್ರಹಿಸುವ ಖಾಸಗಿಯವರಿಂದ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿದೆ. 12 ರಾಜ್ಯಗಳಲ್ಲಿ ಟೆಂಡರ್ ಕರೆಯಲಾಗಿದ್ದು ಟೆಂಡರ್ ಅಂತಿಮವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಅಭಿವೃದ್ದಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಶಾಸಕ ಹೆಚ್.ಆರ್.ಗವಿಯಪ್ಪ ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಡೆ ಸೇವಾ ರಸ್ತೆಗಳಿಲ್ಲದ ಕಾರಣ ದ್ವಿಚಕ್ರವಾಹನದಲ್ಲಿ ತಿರುಗಾಡುವ ಹೆಚ್ಚಿನ ಕಾರ್ಮಿಕರು ಅಪಘಾತದಲ್ಲಿ ಮರಣಹೊಂದಿದ್ದಾರೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸೇವಾರಸ್ತೆಗಳನ್ನು ನಿರ್ಮಿಸಬೇಕು. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ನ್ಯಾಯಾಲಯ ನಿರ್ಮಾಣಕ್ಕೆ 10 ಎಕರೆ ಜಾಗ ನೀಡಿದ್ದು ಇದರ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂದು ಮನವಿ ಮಾಡಿದರು.
ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್, ಹಡಗಲಿ ಶಾಸಕರಾದ ಕೃಷ್ಣನಾಯ್ಕ್ ಅವರು ರಾಜ್ಯ ಹಾಗೂ ಜಿಲ್ಲಾ ರಸ್ತೆಗಳು ಹಾಳಾಗಿದ್ದರಿಂದ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಲೋಕೊಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಶರಣಪ್ಪ ಸೂಲಗುಂಟಿ, ಅಧೀಕ್ಷಕ ಇಂಜಿನಿಯರ್ ಅಮೀನ್ ಮುಕ್ತಾರ್, ಕಾರ್ಯನಿರ್ವಾಹಕ ಇಂಜಿನಿಯರ್ ದೇವದಾಸ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.