ಹೊಂದಾಣಿಕೆಯ ಜೀವನ ಮುಖ್ಯ: ಸುತ್ತೂರು ಶ್ರೀ

ಸಂಜೆವಾಣಿ ನ್ಯೂಸ್
ಮೈಸೂರು: ಮೇ.30:-
ಜೀವನದಲ್ಲಿ ಹೊಂದಾಣಿಕೆ ಅತಿ ಮುಖ್ಯ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.


ಬಿಳಿಗಿರಿರಂಗನ ಬೆಟ್ಟದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಹಾಗೂ ಜೆಎಸ್‍ಎಸ್ ಮಹಾವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಜೀವನೋತ್ಸಾಹ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಕೇವಲ ತಪ್ಪುಗಳನ್ನು ಗುರುತಿಸುತ್ತಾ ಹೋದರೆ ಅದು ಮನಸ್ತಾಪಕ್ಕೆ ಕಾರಣವಾಗುತ್ತದೆ. ಒಳ್ಳೆಯ ಅಂಶಗಳನ್ನು ಗುರುತಿಸುತ್ತಾ ಪ್ರೋತ್ಸಾಹಿಸಿದರೆ ಬದುಕು ಸ್ವರ್ಗದಂತಿರುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಬೇಕಾದರೆ ಸಮಚಿತ್ತದಿಂದ ಇರಬೇಕು. ಪ್ರಕೃತಿಯಲ್ಲಿ ಹಾಗೂ ಎಲ್ಲರಲ್ಲೂ ಭಗವಂತನನ್ನು ಕಾಣಬೇಕು. ಜೀವನದಲ್ಲಿ ಅತಿ ಆಸೆಯೇ ದುಃಖಕ್ಕೆ ಕಾರಣವಾಗುತ್ತದೆ. ಕಾಯಕದೊಂದಿಗೆ ಭಗವಂತನ ಸ್ಮರಣೆ ಮಾಡುತ್ತಾ ನೆಮ್ಮದಿಯಿಂದ ಜೀವನ ಸಾಗಿಸಬೇಕು. ಐವತ್ತು ವರ್ಷಗಳ ಹಿಂದೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಮಠಾಧಿಪತಿಗಳಿಗಾಗಿಯೇ ಶಿಬಿರ ಪ್ರಾರಂಭಿಸಿದರು. ಶಿಬಿರಗಳು ಮನಸ್ಸಿನ ತೊಳಲಾಟಗಳನ್ನು ನಿಯಂತ್ರಿಸಿ ನೆಮ್ಮದಿ ನೀಡುತ್ತವೆ ಎಂದು ಹೇಳಿದರು.


ಮೈಸೂರು ದಕ್ಷಿಣ ವಲಯದ ಡಿಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಸುತ್ತೂರು ಶ್ರೀಮಠ ಮಾನವ ಕಲ್ಯಾಣಕ್ಕಾಗಿ ಮಾಡುತ್ತಿರುವ ಸಾಮಾಜಿಕ ಮತ್ತು ಧಾರ್ಮಿಕ ಸೇವೆ ಅನುಪಮವಾದುದು. ಶಿಬಿರಗಳು ಬದುಕಿಗೆ ನವಚೈತನ್ಯ ನೀಡುತ್ತವೆ. ಅಸ್ತವ್ಯಸ್ತಗೊಂಡಿರುವ ಆಹಾರ ಪದ್ಧತಿ ಮತ್ತು ಪರಿಸರ ಪುನರುಜ್ಜೀವನಗೊಳಿಸಬೇಕಿದೆ. ಜೀವನದಲ್ಲಿ ಕಷ್ಟ-ನಷ್ಟ ಮತ್ತು ಕಲಹಗಳನ್ನು ಧೈರ್ಯದಿಂದ ಎದುರಿಸಬೇಕು. ಶಿಬಿರಾರ್ಥಿಗಳು ತಾವು ಇಲ್ಲಿ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.


ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮಾತನಾಡಿ, ಮನುಷ್ಯನ ದುರಾಸೆಗಳಿಂದ ಜೀವನ ನಾಶವಾಗುತ್ತಿದೆ. ದುರಾಸೆ ಬಿಟ್ಟು ಸಮಾಜಮುಖಿಯಾಗಿ ಕಾರ್ಯ ಮಾಡಬೇಕು. ಇಂದು ಪರಿಸರದ ಉಳಿವು ಅತಿ ಅವಶ್ಯಕವಾಗಿದೆ. ಹಬ್ಬ ಹರಿದಿನಗಳಲ್ಲಿ ಇತರ ಆಚರಣೆಗಳ ಜತೆಗೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.


ಪ್ರೊ.ಎಂ.ಕೃಷ್ಣೇಗೌಡರು ಹಾಸ್ಯ ಎನ್ನುವುದು ಮಾನವನ ಜೀವನದ ಒಂದು ಅಮೂಲ್ಯ ಭಾವನೆ. ಅದಕ್ಕೆ ಮನುಷ್ಯನ ನೋವು, ದುಗುಡಗಳನ್ನು ಮರೆಸುವ ಶಕ್ತಿಯಿರುತ್ತದೆ. ಆಧುನಿಕ ಜೀವನದಲ್ಲಿ ಮನುಷ್ಯರು ಮಾನಸಿಕ ಒತ್ತಡದಲ್ಲಿ ಬದುಕುತ್ತಿದ್ದಾರೆ. ಇಂತಹ ಒತ್ತಡಕ್ಕೆ ಹಾಸ್ಯವೇ ಪರಮೌಷಧಿ. ಬಾಹ್ಯ ಸಮೃದ್ಧಿಗಿಂತ ಆಂತರಿಕ ಸಮೃದ್ಧಿ ಬಹಳ ಮುಖ್ಯ. ಹಾಸ್ಯ ಸ್ನೇಹವನ್ನು ಹೆಚ್ಚಿಸುತ್ತದೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಸುವುದರೊಂದಿಗೆ ಜೀವನ ಸುಂದರವಾಗಿಸುತ್ತದೆ ಎಂದು ತಿಳಿಸಿದರು.


ಶಿಬಿರಾರ್ಥಿಗಳಾದ ಡಾ.ಎಂ.ಸಿ.ಶಂಕರಪ್ಪ, ಭವಾನಿ ನಟರಾಜ, ಜಯಶ್ರೀ ಗೊಳಸಂಗಿ, ಶಕುಂತಲ ರೆಡ್ಡಿ, ರಾಜೇಶ್ವರಿ ಸ್ವಾಮಿ, ಬಿ.ಕೆ.ಗೊಟ್ಯಾಳ, ಎಂ.ಬಿ.ಸದಾಶಿವಯ್ಯ ಅನಿಸಿಕೆಗಳನ್ನು ಹಂಚಿಕೊಂಡರು.
ಎಎಸ್‍ಪಿ ಎಂ.ಎನ್.ಶ್ರೀಧರ್, ಡಿವೈಎಸ್‍ಪಿ ಎಂ.ಧರ್ಮೇಂದ್ರ, ಸರ್ಕಲ್ ಇನ್ಸ್‍ಪೆಕ್ಟರ್ ಆರ್.ಶ್ರೀಕಾಂತ್ ವಿದ್ಯಾಪೀಠದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.