ಸಂಜೆವಾಣಿ ವಾರ್ತೆ
ಹನೂರು: ಆ.7:- ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯದ ಪಚ್ಚೆದೊಡ್ಡಿಯಲ್ಲಿ ನಡೆದ ಹುಲಿ ಹತ್ಯೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಇಂದು ಸೋಮವಾರ ಹನೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಆರೋಪಿಗಳಾದ ಪಚ್ಚಮಲ್ಲ ಅಲಿಯಾಸ್ ಸಣ್ಣ, ಗಣೇಶ್ ಹಾಗೂ ಸಂಪು ಎಂಬವರನ್ನು ಮಾನ್ಯ ನ್ಯಾಯಾಧೀಶರಾದ ಕಾವ್ಯಶ್ರೀ ಅವರೆದುರು ಹಾಜರುಪಡಿಸಿದ ಅರಣ್ಯಾಧಿಕಾರಿಗಳು, ಹೆಚ್ಚಿನ ವಿಚಾರಣೆಗೆ ಅವಕಾಶ ನೀಡಬೇಕೆಂದು ಕೋರಿದರು. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ ಮೂವರನ್ನು ಐದು ದಿನಗಳ ಕಾಲ ಅರಣ್ಯ ಇಲಾಖೆ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.
ಗೋವಿಂದೇಗೌಡ, ಕುರಿಗಾಹಿಗಳಾದ ಕಂಬಣ್ಣ, ಮಂಜುನಾಥ್ ಎಂಬವರನ್ನು ಸದ್ಯದ ಮಟ್ಟಿಗೆ ಅರಣ್ಯ ಇಲಾಖೆಯ ತನಿಖೆಯಿಂದ ಕೈಬಿಟ್ಟಿದ್ದು, ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೂವರು ಸಾಕ್ಷಿಗಳನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ.
ಭಾನುವಾರ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಪ್ರಕರಣದ ಆರೋಪಿ ಸ್ಥಾನದಿಂದ ಗೋವಿಂದೇಗೌಡ ಎಂಬಾತನನ್ನು ಕೈ ಬಿಡಲಾಗಿದ್ದು ಹುಲಿ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆ ಬಹಳಷ್ಟು ಚುರುಕುಗೊಂಡಿದೆ.



























