
ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.01- ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶ ಹೊರಡಿಸಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಉಲ್ಲೇಖಿಸಿದ ಟಿಪ್ಪಣಿ ಮೇರೆಗೆ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗೂ ಹೂಗ್ಯಂ ವಲಯ ಅರಣ್ಯಾಧಿಕಾರಿ ಮಾದೇಶ್ ಅವರಿಗೆ ಮುಂದಿನ ಆದೇಶದ ತನಕ ಕಡ್ಡಾಯ ರಜೆ ಮೇಲೆ ತೆರಳಲು ಆದೇಶಿಸಲಾಗಿದೆ.
ಐದು ಹುಲಿಗಳು ರಸ್ತೆಯಿಂದ ಕೇವಲ 100 ಮೀಟರ್ ದೂರದಲ್ಲಿ ಮೃತಪಟ್ಟಿದ್ದರೂ ಎರಡು ದಿನಗಳವರೆಗೆ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ಬಾರದಿರುವುದು ಹಾಗೂ ಸಾವಿಗೀಡಾದ ಸ್ಥಳದಿಂದ ಕೇವಲ 800 ಮೀಟರ್ ದೂರದಲ್ಲಿ ಕಳ್ಳಬೇಟೆ ನಿಗ್ರಹ ಶಿಬಿರವಿದ್ದರೂ ವನ್ಯಜೀವಿ ರಕ್ಷಣೆಯಾಗದಿರುವುದು ಹಾಗೂ ಕಳೆದ ಮೂರು ತಿಂಗಳಿನಿಂದ ಹೊರಗುತ್ತಿಗೆ ಸಿಬ್ಬಂದಿಗೆ ವೇತನ ಭತ್ಯೆ ನೀಡದೇ ಇರುವುದು ಗಸ್ತು ಕಾರ್ಯಕ್ಕೆ ಅಡಚಣೆ ಉಂಟಾಗಿರುತ್ತದೆ.
ಇದಕ್ಕೆ ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹಾಗೂ ಗಸ್ತು ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದ ಕಾರಣ ಕಡ್ಡಾಯ ರಜೆ ಮೇಲೆ ತೆರಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಇನ್ನು, ಮಲೆಮಹದೇಶ್ವರ ವನ್ಯಜೀವಿಧಾಮದ ಪ್ರಭಾರ ಡಿಸಿಎಫ್ ಆಗಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ್ದ ಸಂತೋμï ಕುಮಾರ್ ಅವರನ್ನು ಹಾಗೂ ಎಸಿಎಫ್ ಆಗಿ ಸ್ಟಪ್ನಿಲ್ ಮನೋಹರ್ ಅಹಿರೆ ಅವರನ್ನು ನೇಮಿಸಲಾಗಿದೆ.