Home ಜಿಲ್ಲೆ ಮಂಗಳೂರು ಹಿರಿಯರ ಹಕ್ಕುಗಳ ರಕ್ಷಣೆ ಮತ್ತು ಪಾಲನೆ ಕಿರಿಯರ ಕರ್ತವ್ಯ ನ್ಯಾ. ಟಿ. ದಮಯಂತಿ ಸೋಮಯ್ಯ

ಹಿರಿಯರ ಹಕ್ಕುಗಳ ರಕ್ಷಣೆ ಮತ್ತು ಪಾಲನೆ ಕಿರಿಯರ ಕರ್ತವ್ಯ ನ್ಯಾ. ಟಿ. ದಮಯಂತಿ ಸೋಮಯ್ಯ

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣದ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ
ಸುಳ್ಯ:ಸಮಾಜದಲ್ಲಿ ಪ್ರತಿಯೊಬ್ಬರಿಗೂ ಜೀವಿಸಲು ಸಂವಿಧಾನವು ಅವರಿಗಾದ ಹಕ್ಕುಗಳನ್ನು ನೀಡಿದೆ. ವಿಶೇಷವಾಗಿ ಹಿರಿಯ ನಾಗರಿಕರ ಹಕ್ಕುಗಳನ್ನು ಕಿರಿಯರು ಅರ್ಥೈಸಿಕೊಂಡು ಅವರ ಹಕ್ಕುಗಳ ರಕ್ಷಣೆ ಮತ್ತು ಪಾಲನೆ ಮಾಡುವುದು ಕಿರಿಯರ ಕರ್ತವ್ಯವಾಗಿದೆ ಎಂದು ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆ ಟಿ. ದಮಯಂತಿ ಸೋಮಯ್ಯ ಹೇಳಿದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಸಮಿತಿ ಸುಳ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುಳ್ಯ, ಹಾಗೂ ತಾಲೂಕು ಪಂಚಾಯಿತಿ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಸುಳ್ತ ತಾ.ಪಂ.ಸಭಾಂಗಣದಲ್ಲಿ ನಡೆದ ವಿಕಲಚೇತನರ ಹಾಗೂ ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವೃದ್ಧ ತಂದೆ ತಾಯಂದಿರನ್ನು ವೃದ್ಧಾಶ್ರಮಗಳಲ್ಲಿ ಸೇರಿಸುವ ಕೆಲವು ಘಟನೆಗಳು ಸಮಾಜದಲ್ಲಿ ಕಂಡುಬರುತ್ತದೆ. ಹಿರಿಯರನ್ನು ಅಗೌರವದಿಂದ ಕಾಣುವುದು ಮತ್ತು ಸಂವಿಧಾನ ಅವರಿಗೆ ನೀಡಿರುವ ಹಕ್ಕುಗಳನ್ನು ಕಿರಿಯರು ಉಲ್ಲಂಘಿಸುವುದು ಕಾನೂನಿನಲ್ಲಿ ಅಪರಾಧವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಹಿರಿಯರಿಗೆ ಆಶ್ರಯವನ್ನು ನೀಡಿ ಅವರ ಆಗುಹೋಗುಗಳಿಗೆ ಸ್ಪಂದಿಸಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ, ನಿವೃತ್ತ ಪ್ರಾಂಶುಪಾಲ ಕೆ.ವಿ ದಾಮೋದರ ಗೌಡ, ಸುಳ್ಯ ತಾಲೂಕು ಆರೋಗ್ಯಾಧಿಕಾರಿ ಆಶಾ ಅಭಿಕಾರ್, ಯುವಜನ ಸೇವಾ ಕ್ರೀಡಾಧಿಕಾರಿ ದೇವರಾಜ್ ಮುತ್ತಾಜೆ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಕೀಲ ಎಂ.ಎಂ.ಬೊಳ್ಳಪ್ಪ ರವರು ಹಿರಿಯ ನಾಗರಿಕರಿಗೆ ಕಾನೂನು ಮಾಹಿತಿ ನೀಡಿದರು. ಗ್ರಾಮೀಣ ಪುನರ್ ವಸತಿ ಕಾರ್ಯಕರ್ತ ಪುಟ್ಟಣ್ಣ ವಲಿಕಜೆ ವಿಕಲಚೇತನರಿಗೆ ಮತ್ತು ಹಿರಿಯರಿಗೆ ಸರಕಾರದಿಂದ ದೊರೆಯುವ ಯೋಜನೆಗಳ ಕುರಿತು, ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಕುರಿತು ಕೆನರಾ ಬ್ಯಾಂಕ್‌ನ ನೋಡಲ್ ಅಧಿಕಾರಿ ಸುಜಾತಾ ನೀಡಿದರು.
ಸಿಬ್ಬಂದಿಗಳಾದ ಚಂದ್ರಶೇಖರ್ ಸ್ವಾಗತಿಸಿ, ಷಣ್ಮುಖ ವಂದಿಸಿದರು. ಹರ್ಷಿತ್ ಹಾಗೂ ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.