
ಉಡುಪಿ: ಧಾರ್ಮಿಕತೆಯೆಂದ ಜಾತಿಯತೆಯನ್ನು ಭೋಧಿಸುವ,ಕುಡಿಯಲೂ ನೀರು ಕೊಡದ,ಕೊನೇಪಕ್ಷ ದೇವರನ್ನೂ ನೋಡಲು ಬಿಡದ ಹಿಂದೂ ಧರ್ಮ ಧರ್ಮವೇ ಅಲ್ಲ.ಎಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹೇಳಿದ್ದರೂ,ಅಂಬೇಡ್ಕರ್‌ರವರ ಭಾವಚಿತ್ರವನ್ನು ಬಳಸುತ್ತಿರವ ಬಗ್ಗೆ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಆಕ್ಷೇಪಿಸಿದ್ದಾರೆ.
ಉಡುಪಿ ಜಿಲ್ಲೆಯ ಹಲವು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಹಿಂದೂ ಸಂಗಮದ ಹೆಸರಿನಲ್ಲಿ ನಡೆಯುವ ಸಮಾಜ್ಯೋತ್ಸವದ ಬ್ಯಾನರ್, ಹಾಗೂ ಕಟಾಟ್‌ಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಬಳಸಲಾಗುತ್ತಿದೆ.
೧೯೫೬ರ ಅಕ್ಟೋಬರ್ ೧೪ರಂದು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮವನ್ನು ಸ್ವೀಕರಿಸುವ ಮೊದಲೇ ೧೯೩೫ರ ಅಕ್ಟೋಬರ್ ೧೩ರಂದು ನಾನು ಹಿಂದೂವಾಗಿ ಹುಟ್ಟಿದ್ದರೂ ಹಿಂದೂವಾಗಿಯೇ ಸಾಯಲಾರೆ ಎಂದು ಫೋಷಿಸಿದ್ದರು.ಈ ವಾಸ್ತವ ವಿಚಾರ ಗೊತ್ತಿದ್ದರೂ ಅವರಿಗೆ ಅವಮಾನಮಾಡುವ ಉದ್ದೇಶದಿಂದ ಹಿಂದೂ ಸಮಾಜ್ಯೋತ್ಸವದಲ್ಲಿ ಅವರ ಭಾವಚಿತ್ರ ಬಳಸುವುದು ಖಂಡನೀಯ.
ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ಧರ್ಮಾಂತರ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಒಟ್ಟು ಇಪ್ಪತ್ತೆರಡು ಪ್ರತಿಜ್ಞೆಗಳನ್ನು ಸ್ವೀಕರಿಸಿದ್ದರು.ಹಿಂದೂ ದೇವರು ದಿಂಡರು,ದೈವದ ಕಲ್ಪನೆ,ಹಿಂದೂ ಸೃಷ್ಟಿ,ಬ್ರಾಹ್ಮಣರ ಪೌರೋಹಿತ್ಯ ಹೀಗೆ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿರುವ ಈ ಸಂಸ್ಕಾರಗಳನ್ನು ಬಿಡುತ್ತೇವೆಂದು ಅವರು ಪ್ರತಿಜ್ಞೆ ತೆಗೆದುಕೊಂಡಿದ್ದರು.
ಇದಲ್ಲದೆ ಅಂಬೇಡ್ಕರ್ ಬರೆದ ಹಿಂದೂ ಧರ್ಮದಲ್ಲಿನ ಒಗಟುಗಳು ಪುಸ್ತಕದಲ್ಲಿ ರಾಮ ಮತ್ತು ಕೃಷ್ಣನ ಜಾಥಾಕವನ್ನು ಬಟ್ಟಾ ಬಯಲುಗೊಳಿಸಿದ್ದಾರೆ ಎಂದಿರುವ ಜಯನ್ ಮಲ್ಪೆ ಅಸ್ಪೃಶ್ಯತಾ ಸಮಸ್ಯೆ ಹಿಂದೂ ಮತ್ತು ದಲಿತರ ನಡುವಿನ ಸಂಘರ್ಷವಾಗಿದೆ.ಹಿಂದೂಗಳ ಮುಂದೆ ಮಂಡಿಯೂರಿ ಜಾತಿಪದ್ದತಿಯನ್ನು ಒಪ್ಪಕೊಳ್ಳುವ ಬದಲು ದಲಿತರು ಸ್ವಾಭಿಮಾನದಿಂದ ಶಕ್ತಿಶಾಲಿಯಾಗಿ ಇದರ ವಿರುದ್ಧ ಹೋರಾಟದಲ್ಲಿ ಜಯಗಳಿಸಬೇಕು ಎಂದಿದ್ದಾರೆ.
ದಲಿತ ಸಮಾಜವನ್ನು ಮತ್ತು ಅಂಬೇಡ್ಕರನ್ನು ಉದ್ದೇಶಪೂರ್ವಕವಾಗಿ ಅವಮಾನಮಾಡುವ ಹಿಂದೂ ಸಮಾಜ್ಯೋತ್ಸವದ ಸಂಘಟಕರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳುವಂತೆ ಜಯನ್ ಮಲ್ಪೆ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.




























