ಹಾಸ್ಟಲ್ ಶಾಲೆ ಪರಿಶೀಲನೆ ಮಾಡಿದಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.18:
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ, ಸದಸ್ಯ ವೆಂಕಟೇಶ್ ಅವರು ಇಂದು ಬೆಳಿಗ್ಗೆ ನಗರದ ಕೋಟೆ ಪ್ರದೇಶದಲ್ಲಿನ ಬಾಲಕಿಯರ ಹಾಸ್ಟಲ್, ವಿದ್ಯಾನಗರದಲ್ಲಿನ ನಂದಾ ರೆಸಿಡೆನ್ಸಿ ಶಾಲೆಯ ಹಾಸ್ಟಲ್, ಇಂದಿರಾ ನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಾಲಕಿಯರ ಹಾಸ್ಟಲ್ ನಲ್ಲಿ ದಾಖಲೆಗಳ‌ ನಿರ್ವಹಣೆಯನ್ನು ಪರಿಶೀಲಿಸಿ. ಹಾಸ್ಟಲ್ ನಲ್ಲಿ ಅಡುಗೆ ಕೆಲಸ ಮಾಡುವವರ ಬಗ್ಗೆ ಪೊಲೀಸ್ ವೆರಿಫಿಕೇಷನ್ ಆಗಿದೆಯಾ ಎಂದು ಪ್ರಶ್ನಿಸಿದರೆ ಉತ್ತರ ಇರಲಿಲ್ಲ.
ಹಾಸ್ಟಲ್ ನಲ್ಲಿ 400 ಮಕ್ಕಳಿದ್ದರೂ ಅವರು ಬಟ್ಟೆಗಳನ್ನು ಒಣಗಿಸಿಕೊಳ್ಳಲು ವ್ಯವಸ್ಥೆ ಇರದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.‌ ಬಟ್ಟೆಗಳು ಒಣಗದೇ ಹಸಿ ಬಟ್ಟೆ ಧರಿಸಿದರೆ ಕಜ್ಜಿ ಸೇರಿದಂತೆ ಚರ್ಮದ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ. ಮೊದಲು ಬಟ್ಟೆ ಒಣಗಿಸಲು ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
ವೈದ್ಯರು ಬಂದು ಸಕಾಲಕ್ಕೆ ಮಕ್ಕಳ ತಪಾಸಣೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಸಿ. ವೈದ್ಯರು ಬಂದು ಕೇವಲ ರಿಜಿಸ್ಟರ ನಲ್ಲಿ ಸಹಿ‌ಮಾಡಿದರೆ ಸಾಲದು ಪರಿಶೀಲನೆ ಸಂದರ್ಭದಲ್ಲಿ ಏನು ಕಂಡು ಬಂದಿದೆ ಎಂಬುದನ್ನು ಏಕೆ ಬರೆದಿಲ್ಲ ಎಂದು ಪ್ರಶ್ನಿಸಿದರು.
ಮಕ್ಕಳ ಸಮಿತಿ‌ಮಾಡಬೇಕು, ಪೋಷಕರ ಸಭೆ ನಡೆಸಬೇಕು ಎಂದು ಹೇಳಿದರು.
ಈ ವೇಳೆ ಮಾತನಾಡಿದ ನಾಗನಗೌಡ ಅವರು 2016 ಮಕ್ಕಳ ರಕ್ಷಣಾ ಕಾಯ್ದೆ ಪ್ರಕಾರ ಶಾಲೆ, ಹಾಸ್ಟಲ್ ಗಳಲ್ಲಿ ಮಕ್ಕಳಿಗೆ ತೊದರೆ ಕೊಡುವಂತಿಲ್ಲ. ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡಬೇಕು. ಊಟ, ಆಟ, ವಸತಿ ವ್ಯವಸ್ಥೆ ಉತ್ತಮವಾಗಿರಬೇಕು ಎಂಬುದನ್ನು ಪರಿಶೀಲನೆ ಮಾಡಿದೆ. ಮಧ್ಯಾಹ್ನ ಅಧಿಕಾರಿಗಳ ಸಭೆ ನಡೆಸಿ ಇಲ್ಲಿ ಕಂಡ ನೂನ್ಯತೆಗಳ ಬಗ್ಗೆ ಚರ್ಚಿಸಿ ಪರಿಹಾರ ಸೂಚಿಸಲಿದೆಂದು ತಿಳಿಸಿದರು
ಹಾಸ್ಟಲ್ಗಳಲ್ಲಿ ಟ್ಯೂಶನ್ ಹೇಳಬಹುದೇ ಎಂಬ ಪ್ರಶ್ನೆಗೆ ಹೇಳಬಹುದು ಅದಕ್ಕೂ ನಿಯಮಗಳಿವೆ ಅದನ್ನು ಪಾಲಿಸಬೇಕು ಎಂದರು.