ಹಾಲು ಉತ್ಪಾದಕರ ರೈತ ಹಿತ ಕಾಪಾಡಲು ಆಡಳಿತ ಮಂಡಲಿ ಬದ್ದ: ಸದಾಶಿವಮೂರ್ತಿ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜೂ. 13:-
ಜಿಲ್ಲಾ ಹಾಲು ಒಕ್ಕೂಟ ರೈತರ ಹಿತವನ್ನು ಕಾಪಾಡುವ ಜೊತೆಗೆ ಅವರಿಗೆ ಅಗತ್ಯವಾದ ಸವಲತ್ತು ಕಲ್ಪಿಸಿ, ರೈತ ಸಂಸ್ಥೆಯನ್ನು ಮುನ್ನಡೆಸಲು ಆಡಳಿತ ಮಂಡಲಿಯ ಎಲ್ಲಾ ನಿರ್ದೇಶಕರು ಶ್ರಮಿಸುತ್ತೇವೆ ಎಂದು ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ ತಿಳಿಸಿದರು.


ನಗರದ ರಾಮಸಮುದ್ರದಲ್ಲಿರುವ ಹಾಲು ಒಕ್ಕೂಟದ ಉಪ ಕೇಂದ್ರದಲ್ಲಿ ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿದ 31 ಮಂದಿ ರೈತರ ಕುಟುಂಬ ವರ್ಗದವರಿಗೆ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ತಲಾ 15 ಸಾವಿರ ರೂ.ಗಳ ಸಹಾಯಧನ ಚೆಕ್ ಹಾಗೂ ಮೂವರು ಡೇರಿ ನೌಕರರಿಗೆ 6.50 ಲಕ್ಷ ರೂ.ಗಳ ಪರಿಹಾರ ಚೆಕ್‍ಗಳನ್ನು ವಿತರಿಸಿ ಅವರು ಮಾತನಾಡಿದರು.


ಚಾಮುಲ್ ಕಳೆದ 9 ವರ್ಷಗಳಿಂದ ಜಿಲ್ಲೆಯ ರೈತರ ಅಭಿವೃದ್ದಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಶ್ರಮಿಸುತ್ತಿದೆ. ಈ ಬಾರಿ ಗರಿಷ್ಟ 3.20 ಲಕ್ಷ ಲೀಟರ್ ಹಾಲು ಸಂಗ್ರಹಿಸಿರುವುದು ದಾಖಲೆಯಾಗಿದೆ. ರೈತರಿಗೆ ಪ್ರತಿ ಲೀಟರ್ ಹಾಲಿಗೆ 34 ರೂ. ನೀಡಲಾಗುತ್ತಿದೆ. ಇದರೊಟ್ಟಿಗೆ ಹಾಲು ಕರೆಯುವ ಯಂತ್ರ, ಮೇವು ಕತ್ತರಿಸುವ ಯಂತ್ರ ಮತ್ತು ಮ್ಯಾಟ್‍ಗಳನ್ನು ಶೇಕಡ 50 ರಷ್ಟು ರಿಯಾಯಿತಿ ದರದಲ್ಲಿ ನೀಡಲಾಸುತ್ತಿದೆ. ಇದರ ಸದುಪಯೋಗವನ್ನು ಪಡೆದುಕೊಂಡ ರೈತರು ಚಾಮುಲ್‍ಗೆ ಹಾಲು ಸರಬರಾಜು ಮಾಡಲು ಮುಂದಾಗಬೇಕು. ಖಾಸಗಿ ಹಾಲು ಸಂಸ್ಥೆಗಳು ನೀಡುವ ಅಲ್ಪ ಆಸೆಗೆ ರೈತ ಸಂಸ್ಥೆಯನ್ನು ಕಡೆಗಣಿಸಬೇಡಿ. ಚಾಮುಲ್ ಬೆಳೆದಷ್ಟು ರೈತರಿಗೆ ಇದರ ಲಾಭ ದೊರೆಯುತ್ತದೆ ಎಂದು ಸದಾಶಿವಮೂರ್ತಿ ತಿಳಿಸಿದರು.


ಚಾಮುಲ್ ಹಿರಿಯ ನಿರ್ದೇಶಕ ಎಚ್.ಎಸ್. ಬಸವರಾಜು ಅವರು ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ, ಚಾಮುಲ್ ಸ್ಥಾಪನೆಯಿಂದ ಜಿಲ್ಲೆಯ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ. ಬಹಳಷ್ಟು ಮಂದಿಗೆ ಗ್ರಾಮದಲ್ಲಿಯೇ ಸ್ವಂತ ಉದ್ಯೋಗ ಹಾಗು ಚಾಮುಲ್ ಘಟಕದಲ್ಲಿ ಅನೇಕರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ. ಐಸ್‍ಕ್ರೀಂ ಘಟಕ ಸ್ಥಾಪನೆಯಿಂದ ಒಕ್ಕೂಟಕ್ಕೆ ಲಾಭ ಇದೆ.
ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ. ಇತ್ತೀಚಿಗೆ ಸಹಕಾರ ಸಂಘಗಳ ಸದಸ್ಯರು ಅಕಾಲಿಕ ಮರಣ ಹೊಂದಿದ್ದು, 31 ಮಂದಿ ರೈತ ಕುಟುಂಬಕ್ಕೆ ತಲಾ 15 ಸಾವಿರದಂತೆ 4.65 ಲಕ್ಷ ರೂ. ಹಾಗೂ ಡೇರಿ ನೌಕರರ ಕುಟುಂಬಕ್ಕು 6.50 ಲಕ್ಷ ರೂ.ಗಳ ಪರಿಹಾರವನ್ನು ಚಾಮುಲ್‍ನಿಂದ ನೀಡಲಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಚಾಮುಲ್ ಉಪ ವ್ಯವಸ್ಥಾಪಕ ಡಾ. ಅಮರ್, ವಿಸ್ತರಣಾಧಿಕಾರಿ ಶ್ಯಾಮ್ ಸುಂದರ್, ಮಾರ್ಗ ವಿಸ್ತರಣಾಧಿಕಾರಿಗಳು, ರೈತರು ಉಪಸ್ಥಿತರಿದ್ದರು.