Home ಜಿಲ್ಲೆ ಮಂಗಳೂರು ಹವಾಮಾನ ವೈಪರೀತ್ಯದಿಂದಾಗಿ ಆಕಾಶದಲ್ಲೇ ಸುತ್ತಾಡಿದ ವಿಮಾನಗಳು; ಜನರಲ್ಲಿ ಆತಂಕ

ಹವಾಮಾನ ವೈಪರೀತ್ಯದಿಂದಾಗಿ ಆಕಾಶದಲ್ಲೇ ಸುತ್ತಾಡಿದ ವಿಮಾನಗಳು; ಜನರಲ್ಲಿ ಆತಂಕ

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಉಂಟಾದ ಅನಿರೀಕ್ಷಿತ ಹವಾಮಾನ ವೈಪರೀತ್ಯ ಹಾಗೂ ಭಾರಿ ಮಳೆಯ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ಎರಡು ವಿಮಾನಗಳು ಲ್ಯಾಂಡಿಂಗ್ ಆಗಲಾಗದೆ ಆಕಾಶದಲ್ಲೇ ಸುದೀರ್ಘ ಕಾಲ ಸುತ್ತಾಡಿದ ಘಟನೆ ಗುರುವಾರ ನಡೆದಿದೆ. ಇದರಿಂದಾಗಿ ವಿಟ್ಲ ಪರಿಸರದ ಸಾರ್ವಜನಿಕರಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮಂಗಳೂರಿನ ಕೆಂಜಾರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯದಲ್ಲಿ ಎರಡು ವಿಮಾನಗಳು ಆಗಮಿಸಿದ್ದವು. ಆದರೆ ಮಂಗಳೂರು ಪರಿಸರದಲ್ಲಿ ಮೋಡ ಕವಿದ ವಾತಾವರಣ ಹಾಗೂ ಗಾಳಿಯ ವೇಗ ಹೆಚ್ಚಾಗಿದ್ದರಿಂದ ರನ್ ವೇ ಸರಿಯಾಗಿ ಕಾಣಿಸದ ಕಾರಣ ಪೈಲಟ್ ಗಳಿಗೆ ವಿಮಾನವನ್ನು ಕೆಳಗಿಳಿಸಲು ಸಾಧ್ಯವಾಗಲಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನಗಳು ಕೆಲಕಾಲ ಆಕಾಶದಲ್ಲೇ ಹಾರಾಟ ನಡೆಸಬೇಕಾಯಿತು.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಈ ವಿಮಾನಗಳು ವಿಟ್ಲ ಪರಿಸರದ ಆಕಾಶದಲ್ಲಿ ಭೂಮಿಗೆ ಹತ್ತಿರವೆಂಬಂತೆ ಸುತ್ತಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಭಯಭೀತರಾದರು. ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿರಬಹುದೇ ಎಂಬ ಅನುಮಾನ ಸಾರ್ವಜನಿಕರನ್ನು ಕಾಡತೊಡಗಿತ್ತು. ಹಲವರು ಕುತೂಹಲ ಮತ್ತು ಆತಂಕದಿಂದ ಆಕಾಶದತ್ತ ದೃಷ್ಟಿ ನೆಟ್ಟಿದ್ದರು.
ಹವಾಮಾನವು ತುಸು ಚೇತರಿಸಿಕೊಂಡ ಬಳಿಕ ಪೈಲಟ್ ಗಳು ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ, ಅರ್ಧ ಗಂಟೆಯ ನಂತರ ಎರಡೂ ವಿಮಾನಗಳನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾದರು.