ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ.ಸೆ.10:- ಹಳ್ಳಿಕಾರ್ ಸಮುದಾಯದ ಅಭಿವೃದ್ಧಿಗಾಗಿ ಮೀಸಲಾತಿ ವರ್ಗಿಕರಣದಲ್ಲಿ ಜಾತಿ ಸಮೀಕ್ಷೆ ನಡೆಯುತ್ತಿದ್ದು ಸೂಕ್ತ ಮಾಹಿತಿ ನೀಡುವುದರ ಮೂಲಕ ಮೀಸಲಾತಿ ವರ್ಗೀಕರಣ ಪಡೆಯಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜ್ ಕರೆ ನೀಡಿದರು.
ತಾಲೂಕಿನ ಹುಣಸೆತೊಪ್ಪಲು ಗ್ರಾಮದಲ್ಲಿ ಹಳ್ಳಿಕಾರ ಸಮುದಾಯದ ಜಾತಿ ಜನಗಣತಿ ಸಮೀಕ್ಷೆ ಕಾರ್ಯದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯ ಸರ್ಕಾರವು ಸೆ. 22ರಿಂದ್ದ ರಾಜ್ಯದಾದ್ಯಂತ ಜಾತಿ ಆಧಾರಿತ ಜನಗಣತಿಯನ್ನು ನಡೆಸುವ ನಿರ್ಧಾರವನ್ನು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಹಳ್ಳಿಕಾರ ಸಮುದಾಯವು ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಸಮಾನ ಅವಕಾಶಗಳನ್ನು ಗಳಿಸಿಕೊಳ್ಳುವ ಸಲುವಾಗಿ ಈ ಅವಕಾಶ ಬಂದೊದಗಿದೆ.ಇದರಿಂದಾಗಿ ನಮ್ಮ ಹಕ್ಕು, ಅರ್ಹತೆಗಳು ಮತ್ತು ಕಲ್ಯಾಣ ಯೋಜನೆಗಳು ನಮ್ಮ ಸಮುದಾಯಕ್ಕೆ ನ್ಯಾಯಯುತವಾಗಿ ಸಲ್ಲ ಬೇಕಾಗಿರುವ ಸಂವಿಧಾನದ ಅನುಕೂಲತೆಗಳು ಹಾಗೂ ನೈಜ ಪ್ರಾತಿನಿಧಿತ್ವ ನಿರ್ಧಾರವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಈ ಜಾತಿ ಗಣತಿಯಲ್ಲಿ ತಪ್ಪದೇ ಭಾಗವಹಿಸಬೇಕು.
ನಾವು ಮೂಲತಃ ಯದುವಂಶದವಾರಾಗಿದ್ದು,ಮೂಲ ಕಸುಬು ಪಂಶುಸಂಗೋಪನೆಯಾಗಿದೆ.ಹಳ್ಳಿಕಾರ್ ತಳಿ ರಾಸುಗಳ ಸಾಕಣೆ,ಸಂರಕ್ಷಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿ ಇದೆ.ವಿವಿಧ ಪ್ರದೇಶಗಳಲ್ಲಿ ವಲಸೆ ಹೋಗಿ ವಾಸಿಸುವ ನಮ್ಮ ಸಮುದಾಯವು ಕೈಗೇಟುಕುವ ಕೆಲಸಗಳನ್ನು ನಿರ್ವಹಿಸಿ ಜೀವನ ಸಾಗಿಸುತ್ತಿದೆ. ಆದರೆ ಅರ್ಹತೆ ಇದ್ದರೂ ಇವರಿಗೆ ನಾನ ಕಾರಣಗಳಿಂದಾಗಿ ಮೀಸಲಾತಿ ಸೌಲಭ್ಯ ಹಾಗೂ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲಾಗಲಿಲ್ಲ ಇದು ಬೇಸರದ ಸಂಗತಿಯಾಗಿದೆ.
ಈ ಸಮೀಕ್ಷ ಕಾರ್ಯದ್ದಲ್ಲಾದರೂ ನಾವು ಎಚ್ಚೆತ್ತುಕೊಂಡು ನಮ್ಮ ಸಮುದಾಯದ ಜನಸಂಖ್ಯೆಯ ನಿಖರ ಮಾಹಿತಿಯನ್ನು ದಾಖಲೆಗಳ ಮೂಲಕ ಅಧಿಕೃತವಾಗಿ ಸರ್ಕಾರಕ್ಕೆ ತಿಳಿಸಬೇಕು. ನಮ್ಮ ಸಮುದಾಯದ ಶೈಕ್ಷಣಿಕ ಆರ್ಥಿಕ ಸ್ಥಿತಿಗತಿ ಸರ್ಕಾರದಕ್ಕೆ ಗಮನಕ್ಕೆ ತರಬೇಕಾಗಿದೆ. ನಮಗೆ ಸಿಗಬೇಕಾದ ಹಕ್ಕುಗಳು ರಾಜಕೀಯ ಪ್ರಾತಿನಿಧ್ಯ ಸರ್ಕಾರಿ ಸೌಲಭ್ಯ ಮತ್ತು ಸಮುದಾಯಪರ ಯೋಜನೆಗಳ ಅನುಷ್ಠಾನಗಳಲ್ಲಿ ಹಳ್ಳಿಕಾರ ಸಮುದಾಯಕ್ಕೆ ನ್ಯಾಯವಾಗಿ ಸಲ್ಲಬೇಕಾಗಿರುವ ಪಾಲು ನಾವು ನೀಡುವ ನಿಖರ ಮಾಹಿತಿಯನ್ನು ಅವಲಂಬಿಸಿರುತ್ತದೆ. ಹಳ್ಳಿಕಾರರ ಆಚಾರ ಸಂಸ್ಕೃತಿ ಮತ್ತು ಪರಂಪರೆಯು ಸಮಾಜದ ಎಲ್ಲಾ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಡುತ್ತದೆ ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಆಗುವಂತೆ ಖಾತರಿ ಪಡಿಸಬೇಕಾಗಿದೆ.
ಆದ್ದರಿಂದ ಜಾತಿಯ ಖಾಲಂ ನಲ್ಲಿ ಹಳ್ಳಿಕಾರ ಎಂದು, ಕುಲಕಸುಬು ಪಶು ಸಂಗೋಪನೆ ಸೇರಿದಂತ್ತೆ ಇತರೆ ಕಸಬುಗಳು ಕೃಷಿ ಕೆಲಸಗಳಲ್ಲಿ ಕೂಲಿ ಮತ್ತು ಅಲ್ಪ ಪ್ರಮಾಣದಲ್ಲಿ ಕೃಷಿ ಕೆಲಸವೆಂದು ನಮೂದಿಸಬೇಕು.ಈ ಜವಾಬ್ದಾರಿಯನ್ನು ಗ್ರಾಮದ ಮುಖಂಡರು,ಯುವ ಪೀಳಿಗೆ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಳ್ಳಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ನಾರಾಯಣ ಮೂರ್ತಿ, ನಿರ್ದೇಶಕರಾದ ಲಕ್ಷ್ಮೀಶ್, ಮಾರುತಿ, ಮಹಾಲಿಂಗಯ್ಯ, ಯುವ ಮುಖಂಡ ಹುಣಸೆತೊಪ್ಪಲು ಭಾಸ್ಕರ್, ಬಾಲಕೃಷ್ಣ, ಆರ್.ಎಂ.ಆರ್ ಟ್ರಸ್ಟ್ ನ ಸದಸ್ಯರಾದ ಜಗದೀಶ್ ಬಾಬು, ಲಕ್ಷ್ಮಿಕಾಂತ್, ಯೋಗೀಶ್, ನಂಜುಂಡ, ಜಿ.ಕೆ.ವೆಂಕಟೇಶ್, ಎನ್.ರವಿ, ಟಿ.ಆನಂದ್, ಸುರೇಶ ಸೇರಿದಂತ್ತೆ ಇತರರು ಹಾಜರಿದ್ದರು.




























