
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.02: ಬಹು ದಿನಗಳ ನಿರೀಕ್ಷಿತ 18 ಕಿಲೋ ಮೀಟರ್ ಉದ್ದದ ಹಲಕುಂದಿ ಬೈ ಪಾಸ್ ರಸ್ತೆ ನಿನ್ನೆ ಸಂಜೆಯಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆಂದು ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ಅಯ್ಯನಗೌಡ ಪಾಟೀಲ್ ಅವರು ಹೇಳಿದ್ದಾರೆ.
ಈಗ ಹೊಸಪೇಟೆಯಿಂದ ಬಂದು ಬೆಂಗಳೂರು, ಅನಂತಪುರಂ, ಗುಂತಕಲ್ಲು ಕಡೆ ತೆರಳಬೇಕಾದ ವಾಹನಗಳು ಅಲ್ಲಿ ಅಲ್ಲಿಪುರ ಆಚೆಯಿಂದ ಹಲಕುಂದಿ ಬೈಪಾಸ್, ಮೂಲಕ ಹಗರಿ ಬಳಿಯ ಗೋಡೆಹಾಳ್ ಕ್ರಾಸ್ ವರೆಗೆ ಸಂಚರಿಸಬಹುದಾಗಿ. ಅದೇ ರೀತಿ ಆಂದ್ರ ಕಡೆಯಿಂದ ಬರುವ ವಾಹನಗಳು ಇದೇ ರಸ್ತೆಯಲ್ಲಿ ಬಂದು ಬೆಂಗಳೂರು ರಸ್ತೆ, ಮತ್ತು ಹೊಸಪೇಟೆ ಕಡೆಗೆ ಹೋಗಬಹುದಾಗಿದೆ.
ಈ ಬೈಪಾಸ್ ರಸ್ತೆ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದರಿಂದ ಅಲ್ಲಂಭವನದ ಮತ್ತು ಕೈಗಾರಿಕಾ ಪ್ರದೇಶದ ಬಳಿಯ ಹಳೆ ಬೈಪಾಸ್ ರಸ್ತೆಗಳಿಂದ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
ಸಧ್ಯ ನಿರ್ಮಾಣ ಆಗುತ್ತಿರುವ ಅನಂತಪುರಂ ರಸ್ತೆಯಿಂದ ಸಂಗನಕಲ್ಲು ಬಳಿಯಿಂದ ಕಪ್ಪಗಲ್ಲು, ತಾಳೂರು ರಸ್ತೆ ಮೂಲಕ ಸಿರುಗುಪ್ಪ ರಸ್ತೆ ಸಂಪರ್ಕಿಸುವ ಬೈ ಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಇದು ಪೂರ್ಣಗೊಂಡರೆ ಸಿರುಗುಪ್ಪ ಕಡೆ ತೆರಳುವ ವಾಹನಗಳು ಸಹ ನಗರದ ಒಳಗೆ ಪ್ರವೇಶ ಇಲ್ಲದಂತಾಗಿ ನಗರದ ಟ್ರಾಫಿಕ್ ಸಮಸ್ಯೆಗೆ ಒಂದಿಷ್ಟು ಪರಿಹಾರ ದೊರೆಯಲಿದೆ.

































