ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.03 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸೋಣ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಕರೆ ನೀಡಿದರು .
ಪಟ್ಟಣದ ತಾ ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಟ್ಟೂರಲ್ಲಿ ಧ್ವಜಾರೋಹಣ ಮಾಡಿ ಬರಬೇಕಾಗಿರುವುದರಿಂದ 9:30ಕ್ಕೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಶಿಸ್ತುಬದ್ಧವಾಗಿ ಭಾಗವಹಿಸಿ ತಮ್ಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಮಕ್ಕಳಿಗೆ ಬಿಸಿಲಿನ ತಾಪ ತಾಗದಂತೆ ಸುತ್ತಲೂ ಶಾಮಿಯಾನ ಹಾಕಬೇಕು. ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ, ಹಾಗೂ ಶುದ್ಧ ಕುಡಿಯುವ ನೀರು ವ್ಯವಸ್ಥೆಯನ್ನು ಕಲ್ಪಿಸಬೇಕು.
ಈ ವರ್ಷವಿಶೇಷವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆಪರೇಷನ್ ಸಿಂಧೂರ ಸಂಬಂಧಿಸಿದ ದೇಶ ಭಕ್ತಿ ಸಾರುವಂತಹ ಗೀತೆಗಳು ಇರಬೇಕು ಎಂದು ಬಿಇಒಗೆ ಹೇಳಿದರು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 5 ಗಣ್ಯರಿಗೆ ಸನ್ಮಾನಿಸಲು ತೀರ್ಮಾನಿಸಲಾಯಿತು. ಪಟ್ಟಣದ ಎಲ್ಲಾ ಬ್ಯಾಂಕ್ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು ಎಂದು ತಹಸೀಲ್ದಾರ್ ಗೆ ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷ ತಹಶೀಲ್ದಾರ್ ಕವಿತ. ಆರ್, ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 14ಮತ್ತು 15ನೇ ತಾರೀಕು ಎಲ್ಲಾ ಇಲಾಖೆಗಳ ಮೇಲೆ ದೀಪಾಲಂಕಾರ ಮಾಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾ ಪಂ ಇ ಒ ಡಾ. ಪರಮೇಶ್ವರಪ್ಪ, ಪುರಸಭೆಯ ಮುಖ್ಯಾಧಿಕಾರಿ ಎಂ ಕೆ ಮುಗಳಿ, ಬಿ ಇ ಒ ಮೈಲೇಶ್ ಬೇವೂರ್, ಕುಡಿಯುವ ನೀರು ಇಲಾಖೆಯ ಎಇಇ ಬಸವ ರೆಡ್ಡಿ, ಪಿಎಸ್ಐ ಬಸವರಾಜ್ ಆಡವಿಬಾವಿ, ಮುಖಂಡರಾದ ಹೆಚ್. ದೊಡ್ಡಬಸಪ್ಪ, ಕನ್ನಿಹಳ್ಳಿ ಚಂದ್ರಶೇಖರ್, ಸಂಘಟನೆಯ ಭರಮಜ್ಜ, ಇತರರಿದ್ದರು.






















