
ಸಂಜೆವಾಣಿ ವಾರ್ತೆ
ಹನೂರು ಮೇ 30 :- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಎಸ್ ಅನಿಲ್ ಕುಮಾರ್ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕಿ ಪುಷ್ಪಲತಾ ಶಿವಮಲ್ಲು ಅವರು ಆಯ್ಕೆಯಾಗಿದ್ದಾರೆ.
ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೇ 13 ರಂದು ಚುನಾವಣೆ ನಡೆದು ಸಾಲಗಾರರಲ್ಲದ ಕ್ಷೇತ್ರದಿಂದ ಮಾಜಿ ಶಾಸಕ ಆರ್. ನರೇಂದ್ರ ಸಾಲಗಾರರ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಶ್ರೀನಿವಾಸ್ ಗೌಡ, ನಟರಾಜು, ಅನಿಲ್ ಕುಮಾರ್ ,ಕೆಂಚನಾಯ್ಕ, ಪುಷ್ಪಲತಾ, ಶಿವಮಲ್ಲು, ನಾಗರತ್ನಮ್ಮ, ಬಿಜೆಪಿ, ಜೆಡಿಎಸ್ ಮೈತ್ರಿ ಪಕ್ಷದಿಂದ ರಾಜುಗೌಡ, ಲಿಂಗೇಗೌಡ, ರಂಗಸ್ವಾಮಿ ನಾಯ್ಡು, ಗೋವಿಂದ, ಮಹದೇಶ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.
ಮೇ 29 ರಂದು ಅಧ್ಯಕ್ಷರು ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕ ಅನಿಲ್ ಕುಮಾರ್ ಅಧ್ಯಕ್ಷ ಸ್ಥಾನಕ್ಕೂ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷದಿಂದ ಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕಿ ಪುಷ್ಪಲತಾ, ಮೈತ್ರಿ ಪಕ್ಷದಿಂದ ರಂಗಸ್ವಾಮಿ ನಾಯ್ಡು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಯಾರೊಬ್ಬರು ವಾಪಸ್ ಪಡೆಯದೆ ಇದ್ದಿದ್ದರಿಂದ ಅಂತಿಮವಾಗಿ ಚುನಾವಣೆ ನಡೆದು ಏಳು ಮತ ಪಡೆದ ಅನಿಲ್ ಕುಮಾರ್ ಅಧ್ಯಕ್ಷರಾಗಿ, ಎಂಟು ಮತ ಪಡೆದ ಪುಷ್ಪಲತಾ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಮುಖಂಡರುಗಳು ಮಾಜಿ ಶಾಸಕ ಆರ್. ನರೇಂದ್ರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜಯ ಘೋಷ ಕೂಗಿ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಮಾಜಿ ಶಾಸಕ ಹಾಗೂ ನಿರ್ದೇಶಕ ಆರ್. ನರೇಂದ್ರ ಮಾತನಾಡಿ ಕಳೆದ 20 ವರ್ಷಗಳಿಂದ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ಸಂಘಗಳಿಗೆ ಎಲ್ಲಿಯೂ ಚುನಾವಣೆ ನಡೆದಿಲ್ಲ ಆದರೆ ಇದೀಗ ರಾಜಕೀಯ ಬೆರೆತು ಚುನಾವಣೆ ನಡೆದಿದೆ. ಮುಂದಿನ ದಿನಗಳಲ್ಲಾದರೂ ರೈತಪರ ಕಾಳಜಿ ಇದ್ದರೆ ಸಹಕಾರ ಕ್ಷೇತ್ರಕ್ಕೆ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷನಾಗುವ ಮೊದಲು ಚಾಮರಾಜನಗರ ಜಿಲ್ಲೆಗೆ ಕೇವಲ 28 ಕೋಟಿ ಮಾತ್ರ ಸಾಲ ನೀಡಿದ್ದರು. ಅಧ್ಯಕ್ಷನಾಗಿ ಆಯ್ಕೆಯಾದ ನಂತರ 400 ಕೋಟಿಗೂ ಹೆಚ್ಚು ಸಾಲ ವಿತರಣೆ ಮಾಡಿದ್ದೇವೆ. ಈ ಹಿಂದೆ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ಕಚೇರಿಯೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು ಇದರಿಂದ ರೈತ ಬಾಂಧವರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ಹನೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ 68 ಲಕ್ಷ ವೆಚ್ಚದಲ್ಲಿ ನೂತನ ಶಾಖೆ ಪ್ರಾರಂಭಿಸಲಾಗಿದೆ ಎಂದರು.
ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2.76 ಕೋಟಿ ಲಾಭವಿದ್ದು 1.76 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಮೊದಲ ಅಂತಸ್ತಿನಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಎರಡನೇ ಅಂತಸ್ತಿನಲ್ಲಿ ಅಧ್ಯಕ್ಷರು ಉಪಾಧ್ಯಕ್ಷರ ಕೊಠಡಿ, ಕಾರ್ಯದರ್ಶಿಗಳು ಹಾಗೂ ಸಭೆ ನಡೆಸಲು ವಿಶೇಷ ಕೊಠಡಿ ನಿರ್ಮಾಣ ಮಾಡಲಾಗುವುದು. ಈ ಕಟ್ಟಡ ನಿರ್ಮಾಣಕ್ಕೆ ಅಪೆಕ್ಸ್ ಬ್ಯಾಂಕಿನಿಂದ 30 ಲಕ್ಷ ಎಂ.ಸಿ.ಡಿ.ಸಿ.ಸಿ ಬ್ಯಾಂಕ್ ನಿಂದ 5 ಲಕ್ಷ ಅನುದಾನ ಕೊಡಿಸಿದ್ದೇನೆ ಎಂದರು.
ಒಟ್ಟಾರೆ ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಪಕ್ಷಾತೀತವಾಗಿ ಮತ ನೀಡಿದ ರೈತ ಬಾಂಧವರು ಮುಖಂಡರುಗಳಿಗೆ ಧನ್ಯವಾದ ತಿಳಿಸಿದರು.
ಈ ವೇಳೆ ನೂತನ ಅಧ್ಯಕ್ಷ ಅನಿಲ್ ಕುಮಾರ್, ಉಪಾಧ್ಯಕ್ಷ ಪುಷ್ಪಲತಾ, ನಿರ್ದೇಶಕರುಗಳಾದ ಶ್ರೀನಿವಾಸ್ ಗೌಡ, ಕೆಂಚನಾಯ್ಕ, ನಾಗರತ್ನಮ್ಮ, ಪಟ್ಟಣ ಪಂ. ಸದಸ್ಯರಾದ ಗಿರೀಶ್, ಹರೀಶ್, ನವೀನ್, ಮಾಜಿ ಸದಸ್ಯ ಬಸವರಾಜು,ತಾಪಂ ಮಾಜಿ ಅಧ್ಯಕ್ಷ ವೆಂಕಟರಮಣ ನಾಯ್ಡು, ಮುಖಂಡರಾದ ನಾಗೇಂದ್ರ, ರಮೇಶ್ ನಾಯ್ಡು, ರವೀಂದ್ರ, ಪ್ರದೀಪ್ ಕುಮಾರ್, ಮಾದೇಶ್, ರವಿ, ಲಿಂಗಶೆಟ್ಟಿ, ವೆಂಕಟೇಶ್, ರಾಜು, ರಾಜೇಶ್, ಚೇತನ್ ದೊರೆರಾಜು, ಮಲ್ಲು, ಮರಿಗೌಡ, ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.