Home ಜಿಲ್ಲೆ ಮೈಸೂರು ಹನೂರು ಪಟ್ಟಣ ಹುಲ್ಲೇಪುರ ಆಶ್ರಯ ಯೋಜನೆಯ ಕೋಟ್ಯಂತರ ಮೌಲ್ಯದ: ಜಮೀನಿಗೆ ಅಕ್ರಮ ಖಾತೆ

ಹನೂರು ಪಟ್ಟಣ ಹುಲ್ಲೇಪುರ ಆಶ್ರಯ ಯೋಜನೆಯ ಕೋಟ್ಯಂತರ ಮೌಲ್ಯದ: ಜಮೀನಿಗೆ ಅಕ್ರಮ ಖಾತೆ

ಸಂಜೆವಾಣಿ ವಾರ್ತೆ
ಹನೂರು ಆ 4 :-
ಹನೂರು ಪಟ್ಟಣದ ಹುಲ್ಲೇಪುರ ಆಶ್ರಯ ಯೋಜನೆಯ ಕೋಟ್ಯಂತರ ರೂ. ಮೌಲ್ಯದ ಸುಮಾರು 70 ರಿಂದ 80 ಮೀಸಲು ಸೈಟುಗಳು ಅಕ್ರಮವಾಗಿ ಖಾತೆಯಾಗಿದ್ದು, ಸರ್ಕಾರ ಕೂಡಲೇ ಅಕ್ರಮ ಖಾತೆಗಳನ್ನು ರದ್ದುಪಡಿಸಿ ಮೀಸಲು ಸೈಟುಗಳನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಕುಮಾರ ದೊರೆ ಆಗ್ರಹಿಸಿದ್ದಾರೆ.


ಹನೂರು ಪಟ್ಟಣದಲ್ಲಿ ಇಂದು ನಡೆದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಆಶ್ರಯ ಯೋಜನೆಯ ಸರ್ವೆ ನಂಬರ್ 145/ಎ ಹಳ್ಳಮತ್ತು 145/ಬಿ ಯಲ್ಲಿನ ಎಲ್.ಎಫ್ ರಸ್ತೆ ವ್ಯಾಪ್ತಿಯಲ್ಲಿ ಸುಮಾರು 35 ರಿಂದ 40 ಸೈಟು ಆಸ್ತಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದನ್ನು ಕಾನೂನಾತ್ಮಕವಾಗಿ ಇನ್ನೂ ಬಗೆಹರಿಸಿಲ್ಲ ಎಂದು ಆರೋಪಿಸಿದರು.


ತನಿಖಾ ತಂಡ ರಚನೆಗೆ ಸಚಿವರ ಭರವಸೆ :-
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಪುಟ್ಟರಂಗಶೆಟ್ಟಿ ಅವರು, ಈ ಪ್ರಕರಣದ ಕುರಿತು ತನಿಖಾ ತಂಡವನ್ನು ರಚನೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್ ಅವರು, ಕೊಳ್ಳೇಗಾಲ ಉಪವಿಭಾಗದಲ್ಲಿ ಈ ಹಿಂದೆ ಇದ್ದ ಎ.ಸಿ ಮಹೇಶ್ ಅವರು ಈ ಕುರಿತು ತನಿಖೆ ಕೈಗೊಂಡಿದ್ದರು. ಅವರು ವರ್ಗಾವಣೆಯಾದ ನಂತರ ಈಗ ಇರುವ ಎ.ಸಿ ದಿನೇಶ್ ಕುಮಾರ್ ಮೀನಾ ತನಿಖೆ ಕೈಗೊಂಡು ವರದಿಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ದಿನಾಂಕ :- 26-11-2025 ರಂದು ನೀಡಿರುವ ವರದಿಯ ಬಗ್ಗೆ ತನಿಖೆ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ತನಿಖಾ ತಂಡ ರಚನೆ ಮಾಡಿ, ಎಲ್.ಎಫ್ ರಸ್ತೆ ಆಶ್ರಯ ಯೋಜನೆ ಅಡಿ ಸೈಟುಗಳು ಹಂಚಿಕೆಯಾಗಿರುವ ಬಗ್ಗೆ ಕಾನೂನಾತ್ಮಕವಾಗಿ ಏನು ಮಾಡಬಹುದು ಎಂದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


ಕೊಳ್ಳೇಗಾಲ ಉಪವಿಭಾಗಾಧಿಕಾರಿ ಈಗಾಗಲೇ ವರದಿ ನೀಡಿದ್ದು, ಸರ್ವೆ ನಂ 145/ಎ ರ 1.54 ಎಕರೆ ಸರ್ಕಾರಿ ಹಳ್ಳ ಮತ್ತು 145/ಬಿ ರ 5.54 ಎಕರೆ ಎಲ್.ಎಫ್ ರಸ್ತೆ ಜಾಗದಲ್ಲಿ 115 ನಿವೇಶನ ಹಂಚಿಕೆ ಅಕ್ರಮವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸರ್ಕಾರ ಕೂಡಲೇ ಮೀಸಲು ಆಕ್ರಮ ಸೈಟುಗಳನ್ನು ವಶಕ್ಕೆ ಪಡೆಯಬೇಕು ಎಂದು ಕುಮಾರ ದೊರೆ ಒತ್ತಾಯಿಸಿದರು.