ಹನೂರು ಪಟ್ಟಣದಲ್ಲಿ ಬಿಜೆಪಿ ಮಂಡಲದಿಂದ ಅಪರೇಷನ್ ಸಿಂಧೂರ ತಿರಂಗಾ ಯಾತ್ರೆ

ಸಂಜೆವಾಣಿ ವಾರ್ತೆ
ಹನೂರು ಮೇ 23 :-
ಉಗ್ರರು ನಡೆಸಿದ ಪೆಹಲ್ಗಾಮ್ ದಾಳಿ ಪ್ರತಿಕಾರವಾಗಿ ಭಾರತೀಯ ಯೋಧರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ದಮನಕ್ಕೆ ನಡೆಸಿದ ಯಶಸ್ವಿ ಕಾರ್ಯಚರಣೆ ಅಂಗವಾಗಿ ಹನೂರು ಬಿಜೆಪಿ ಮಂಡಲ ವತಿಯಿಂದ ಗುರುವಾರ ಸಂಜೆ ತಿರಂಗ ಯಾತ್ರೆಯನ್ನು ಪಟ್ಟಣದಲ್ಲಿ ನಡೆಸಲಾಯಿತು.


ಬಿಜೆಪಿ ಮಂಡಲ ಅಧ್ಯಕ್ಷ ಕೆ.ಪಿ.ವೃಷಭೇಂದ್ರ ನೇತೃತ್ವದಲ್ಲಿ ಪಟ್ಟಣದ ಆರ್.ಎಂ.ಸಿ. ಆವರಣದಿಂದ ಹೊರಟ ದೇಶಾಭಿಮಾನಿಗಳು ವೀರ ಯೋಧರಿಗೆ ಜಯ ಘೋಷಣೆಗಳನ್ನು ಕೂಗುತ್ತಾ ಅಂಬೇಡ್ಕರ್ ಡಾ|| ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಖಾಸಗಿ ಬಸ್ ನಿಲ್ದಾಣ ವೃತ್ತದವರೆಗೆ ತಿರಂಗ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಬಳಿಕ ಮಾನವ ಸರಪಳಿ ಮಾದರಿಯಲ್ಲಿ ಸುತ್ತುವರಿದು ಜಯಕಾರ ಕೂಗಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಕೆ.ಪಿ.ವೃಷಭೇಂದ್ರ ಮಾತನಾಡಿ, ಭಾರತೀಯರು ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಪ್ರವಾಸಿಗರನ್ನು ಗುಂಡಿಟ್ಟು ಕೊಂದಿದ್ದ ಪ್ರತಿಕಾರವಾಗಿ ಭಾರತ ಸರ್ಕಾರ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಕೈಗೊಂಡು ನೂರಾರು ಭಯೋತ್ಪಾದಕರು ಮತ್ತು ಅಡಗುತಾಣಗಳನ್ನು ಛಿದ್ರಗೊಳಿಸಿದ್ದಾರೆ. ಈ ವಿಜಯೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದ ಮೇರೆಗೆ ದೇಶದಾದ್ಯಂತ ತಿರಂಗ ಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಂತೆ ಹನೂರು ಮಂಡಲದಲ್ಲಿ ಜಾತ್ಯತೀತವಾಗಿ, ಪಕ್ಷಾತೀತವಾಗಿ ನಾಗರೀಕರೆಲ್ಲರೂ ಯಾತ್ರೆಯಲ್ಲಿ ಭಾಗವಹಿಸಿ ಭಾರತೀಯ ಸೈನಿಕರಿಗೆ ಬೆಂಬಲವಾಗಿ ಈ ಯಾತ್ರೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಜಗನಾಥ್ ನಾಯ್ಡು, ಒ.ಬಿ.ಸಿ ಸಂಚಾಲಕ ಲೋಕೇಶ್ ಜತ್ತಿ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಜಡೇಸ್ವಾಮಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವರಪ್ರಸಾದ್, ಮುಖಂಡರಾದ ಮಾತೃಭೂಮಿ ಮೂರ್ತಿ, ತೆಳ್ಳನೂರು ವಿಜಯ್, ಮಹಾಶಕ್ತಿ ಕೇಂದ್ರದ ಮುತ್ತುಸ್ವಾಮಿ, ಧರ್ಮ ಜಾಗರಣ ಚಿಕ್ಕರಾಜು, ರವಿ, ವಕೀಲ ಚಿನ್ನರಾಜು, ಮೂರ್ತಿ, ಬಸವಣ್ಣ, ಇನ್ನಿತರರು ಇದ್ದರು.