
ಸಂಜೆವಾಣಿ ನ್ಯೂಸ್
ಮೈಸೂರು.ಫೆ.04:- ಹದಿನೈದು ದಿನಗಳಲ್ಲಿ ಟನ್ ಕಬ್ಬಿಗೆ ಬಾಕಿ ಹಣವನ್ನು ಕಬ್ಬು ಕಾರ್ಖಾನೆ ಮಾಲೀಕರಿಂದ ಕೊಡಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಮಂಗಳವಾರ ನಡೆದ ಕಬ್ಬು ಬೆಳೆಗಾರರು ಹಾಗೂ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಜೊತೆಗಿನ ಸಭೆಯಲ್ಲಿ ಮಾತನಾಡಿದರು. ಕಬ್ಬು ಬೆಳೆಗಾರರಿಗೆ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳೂ ಎರಡೂ ಸೇರಿ ಪ್ರತಿ ಟನ್ ಕಬ್ಬಿಗೆ ಬಾಕಿ ನೀಡಬೇಕಾಗಿರುವ ನೂರು ರೂಪಾಯಿಯನ್ನು ಇನ್ನೂ ಹದಿನೈದು ದಿನದಲ್ಲಿ ಸಂದಾಯ ಮಾಡಲು ಕ್ರಮ ವಹಿಸಲಾಗುತ್ತದೆ. ರೈತರು ಬೆಳೆದ ಕಬ್ಬಿಗೆ ಹೆಚ್ಚುವರಿಯಾಗಿ ಸರ್ಕಾರ 50 ರೂಪಾಯಿ ನೀಡಬೇಕು ಹಾಗೂ ಕಬ್ಬು ಸರಬರಾಜು ಮಾಡಿಸಿಕೊಂಡಿರುವ ಸಕ್ಕರೆ ಕಾರ್ಖಾನೆಯೂ 50 ರೂಪಾಯಿಯನ್ನು ನೀಡಬೇಕು. ಇದರ ಅನ್ವಯ ಸರ್ಕಾರವು ಆದ್ಯತೆ ಮೇರೆಗೆ ಮೈಸೂರು ಜಿಲ್ಲೆಗೆ ಮುಂಚಿತವಾಗಿಯೇ ಹಣವನ್ನು ಬಿಡುಗಡೆ ಮಾಡುತ್ತಿದೆ. ಸರ್ಕಾರದ ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಹಣವು ಬರಲು ವಾರದ ಮೇಲೆಗಾಗುತ್ತದೆ. ತದನಂತರ ಇಲ್ಲಿ ಪ್ರಕ್ರಿಯೆಗಳು ಮುಗಿಯಲು ಒಂದು ವಾರಕ್ಕೂ ಹೆಚ್ಚು ಸಮಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹದಿನೈದು ದಿನಗಳ ನಂತರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಹೇಳಿದರು.
ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯೂ ಕೂಡ ಇದೇ ಸಮಯದಲ್ಲೇ ತಾನು ನೀಡಬೇಕಾಗಿರುವ 50 ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಬೇಕು. ಯಾವುದೇ ಕಾರಣಕ್ಕೂ ಸಬೂಬುಗಳನ್ನು ಹೇಳಬಾರದು. ಇದು ಸರ್ಕಾರದ ಆದೇಶವಾಗಿದ್ದೂ, ಅದೇಶವನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುವುದು ಕಾರ್ಖಾನೆಯ ಕರ್ತವ್ಯವಾಗಿದೆ. ಇದನ್ನು ಮೀರಿ ರೈತರ ಬಾಕಿ ಹಣವನ್ನು ಪಾವತಿ ಮಾಡಲು ವಿಫಲರಾದರೆ ಕಾನೂನಾತ್ಮಕ ಕ್ರಮಗಳನ್ನು ತಗೆದುಕೊಂಡು ಸಕ್ಕರೆ ಕಾರ್ಖಾನೆ ಮೇಲೆ ದಂಡವನ್ನು ವಿಧಿಸುವ ಹಾಗೂ ಬೇರೆ ರೀತಿಯ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬಿನ ಇಳುವರಿ ಅಂಶದಲ್ಲಿ ವಂಚನೆ ಮಾಡಲಾಗುತ್ತಿದೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ. ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಕಳೆದ ವರ್ಷವೂ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ವತಿಯಿಂದ ಕಬ್ಬಿನ ಇಳುವರಿಯ ಪರೀಕ್ಷೆ ಮಾಡಿಸಲಾಗುತ್ತು. ಅವರು ಯಾವುದೇ ವ್ಯತ್ಯಾಸ ಇಲ್ಲ ಎಂದು ವರದಿ ಕೊಟ್ಟಿದ್ದರು. ಆದರೆ ರೈತರ ಅನುಮಾನವೂ ದೂರವಾಗದ ಹಿನ್ನೆಲೆಯಲ್ಲಿ ಈ ಸಲ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಹೊತ್ತಿಗೆ ತಾವೇ ಖುದ್ದಾಗಿ ಅನಿರೀಕ್ಷಿತವಾಗಿ ಭೇಟಿ ನೀಡಿ, ಸ್ಥಳದಲ್ಲೇ ಇಳುವರಿ ಪರೀಕ್ಷೆ ಮಾಡುತ್ತೇವೆ. ನಮ್ಮ ಜೊತೆ ರೈತ ಸಂಘಟನೆಗಳ ಮುಖಂಡರು, ಕಬ್ಬು ಬೆಳೆಗಾರರು ಇರುತ್ತಾರೆ. ಅವರ ಸಮ್ಮುಖದಲ್ಲೇ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯವರಿಂದ ಪರೀಕ್ಷಾ ಉಪಕರಣಗಳನ್ನು ತರಿಸಿ ಪರೀಕ್ಷೆಯನ್ನು ಮಾಡಲಾಗುತ್ತದೆ. ಇದನ್ನು ಒಂದೇ ಸಲಕ್ಕೆ ಮುಗಿಸದೇ ಎರಡೂ-ಮೂರು ಬಾರಿ ಪರೀಕ್ಷೆ ನಡೆಸಿ, ಅಮೇಲೆ ಒಂದು ನಿರ್ಣಯಕ್ಕೆ ಬರಲಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಹಲವಾರು ಬೇಡಿಕೆ ಸಲ್ಲಿಸಿದರು. ಉತ್ತರ ಕರ್ನಾಟಕದಲ್ಲಿ ಕಬ್ಬಿನ ಇಳುವರಿಯನ್ನು 10.15 ರಷ್ಟು ನೀಡಲಾಗುತ್ತದೆ. ನಮ್ಮಲ್ಲಿ ಮಾತ್ರ 9.5ರಷ್ಟನ್ನು ನೀಡಲಾಗುತ್ತದೆ. ಈ ತಾರತಮ್ಯ ತಪ್ಪಿಸಬೇಕು. ಸಕ್ಕರೆ ಕಾರ್ಖಾನೆಯೂ ಕಬ್ಬು ಬೆಳೆಗಾರರಿಗೆ ನೀಡುವ ಅಣುಗೊಬ್ಬರ, ಸೂಕ್ಷ್ಮ ಪೆÇೀಷಕಾಂಶಗಳಿಗೆ ವಿಧಿಸುವ ಬಡ್ಡಿಯನ್ನು ರದ್ದುಪಡಿಸಬೇಕು. ಕಾರ್ಖಾನೆ ಜೊತೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಯೋಜನೆ ಜಾರಿಯಾಗಬೇಕು. ಸಕಾಲದಲ್ಲಿ ಕಬ್ಬನ್ನು ಕಟಾವು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯತಿ ಸಿಇಒ ಎಸ್.ಯುಕೇಶ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್,ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜು,ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್, ಕೆರೆ ಹುಂಡಿ ರಾಜಣ್ಣ ವಳಗೇರ ಗಣೇಶ, ದೇವನೂರು ನಾಗೇಂದ್ರ ಮತ್ತಿತರರು ಇದ್ದರು.




























