
ಸಂಜೆವಾಣಿ ವಾರ್ತೆ
ಚಾಮರಾಜನಗರ, ನ.22- ಜಿಲ್ಲೆಯ ವ್ಯಾಪ್ತಿಯ ರೈತರ ಸಮಸ್ಯೆಗಳನ್ನು ಶೀಘ್ರ ಸ್ಪಂಧಿಸಿ ಬಗೆಹರಿಸಬೇಕೆಂದು ಒತ್ತಾಯಿಸಿ ಹಾಗೂ ಮೆಕ್ಕಜೋಳ, ರಾಗಿ ಖರೀದಿ ಕೇಂದ್ರ ಸ್ಥಾಪನೆ ಸೇರಿದಂದ ಐದು ಪ್ರಮುಖ ಬೇಡಿಕೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುತ್ತಿಗೆ ಕಾರ್ಯಕ್ರಮವನ್ನು ನ.23ರ ಸೋಮವಾರ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲಾ ರೈತರು ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಮುಖಂಡರ ಪೂರ್ವ ಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಸಕಾಲದಲ್ಲಿ ಯೋಜನೆಗಳನ್ನು ಜಾರಿ ಮಾಡದ ಪರಿಣಾಮ ರೈತರು ಇನ್ನು ಸಹ ಬಡವರಿಗೇ ಇದ್ದಾರೆ. ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಜಡ್ಡು ಗಟ್ಟಿರುವ ಆಡಳಿತ ವ್ಯವಸ್ಥೆ ಹಾಗೂ ರೈತ ವಿರೋಧಿ ಧೋರಣೆಗಳ ವಿರುದ್ದ ನಮ್ಮ ಹೋರಾಟ ನಿರಂತವಾಗಬೇಕು. ಈ ನಿಟ್ಟಿನಲ್ಲಿ ಪ್ರಮುಖ ಐದು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ. 24 ರಂದು ನಡೆಯುವ ಪ್ರತಿಭಟನಾ ಮೆರವಣಿಗೆ, ಬೈಕ್ ರ್ಯಾಲಿಗೆ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು, ಪದಾಧಿಕಾರಿಗಳು, ರೈತರು ಭಾಗವಹಿಸಬೇಕು ಎಂದು ತಿಳಿಸಿದರು.
ಅಂದು ಬೆಳಗ್ಗೆ ಆಯಾ ತಾಲೂಕು ಕೇಂದ್ರಗಳಿಂದ ಬೈಕ್ ರ್ಯಾಲಿ ಮೂಲಕ ನಾಲ್ಕು ದಿಕ್ಕುಗಳಿಂದ ಜಿಲ್ಲಾಡಳಿತ ಭವನಕ್ಕೆ ಬಂತು ತಲುಪಬೇಕು ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ಈಗಾಗಲೇ ಘೊಷಣೆ ಮಾಡಿರುವಂತೆ ಎಪಿಎಂಸಿಗಳಲ್ಲಿ ಮೆಕ್ಕೆಜೋಳ, ರಾಗಿ, ಜೋಳ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿ ಮಾಡಬೇಕು. ಅರಣ್ಯ ಇಲಾಖೆಗೆ ಸಂಬಂಧಿಸಿದ ವನ್ಯಜೀವಿ ಹಾಗು ಮಾನವ ಸಂಘರ್ಷ ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಲಬೇಕು. ಜಿಲ್ಲೆಯ ಗ್ರಾಮೀಣ ಪ್ರದೇಶ ರಸ್ತೆಗಳ ಅಭಿವೃದ್ದಿ ಹಾಗೂ ಟೋಲ್ ಸಂಬಂಧಿಸಿದಂತೆ ರೈತರಿಗೆ ಅನುಕೂಲವಾಗುವಂತ ತೆರಿಗೆ ವಿನಾಯಿತಿ ನೀಡಬೇಕು. ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಅರಿಶಿಣ ಖರೀದಿ ಕೇಂದ್ರ ಆರಂಭವಾಗಬೇಕು. ಗ್ರಾಮ ಪಂಚಾಯಿತಿಗಳಲ್ಲಿ ರೈತರಿಗೆ ಇಸ್ವತ್ತು, ಇತರೇ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಆಗುತ್ತಿರುವ ವಿಳಂಬ ಧೋರಣೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುತ್ತಿಗೆ ಕಾರ್ಯಕ್ರಮವನ್ನುಹಮ್ಮಿಕೊಳ್ಳಲಾಗಿದೆ ಎಂದು ಪ್ರಕಾಶ್ ಮಾಹಿತಿ ನೀಡಿದರು.
ಸಭೆಯಲ್ಲಿ ಹನುರು ಚಂಗಡಿ ಕರಿಯಪ್ಪ, ಮಾದಪ್ಪ. ಕಲ್ಪುರ ಪಾಪು, ವೀರಭದ್ರಸ್ವಾಮಿ, ಬೆಟ್ಟದಪುರ ಮಹದೇವಸ್ವಾಮಿ, ಜಗದೀಶ, ಗುಂಡ್ಲುಪೇಟೆ ಮಹದೇವಪ್ರಸಾದ್, ಶಶಿ, ಮಾಯಿ, ಪಾಪಣ್ಣ ಮೊದಲಾದವರು ಇದ್ದರು.




























