Home Uncategorized ಹಂಪಿ: ಹೋಂ ಸ್ಟೇ ಗಳ ದರ್ಭಾರ್-ಕೇವಲ ದಾಳಿಗೆ ಸೀಮಿತವಾಗದಿರಲಿ : ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಕ್ಕೆ  ಸಾರ್ವಜನಿಕರ...

ಹಂಪಿ: ಹೋಂ ಸ್ಟೇ ಗಳ ದರ್ಭಾರ್-ಕೇವಲ ದಾಳಿಗೆ ಸೀಮಿತವಾಗದಿರಲಿ : ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮಕ್ಕೆ  ಸಾರ್ವಜನಿಕರ ಆಗ್ರಹ

ಸಂಜೆವಾಣಿ ವಾರ್ತೆ

ಹೊಸಪೇಟೆ, ಮೇ.12. ವಿಶ್ವ ವಿಖ್ಯಾತ ಹಂಪಿಯಲ್ಲಿ ನಾಯಿಕೊಡೆಗಳಂತೆ ಅನಧಿಕೃತವಾಗಿ ತಲೆ ಎತ್ತಿರುವ ಅನಧಿಕೃತ ಹೋಂ ಸ್ಟೇ, ವಸತಿ ಗೃಹ ಹಾಗೂ ಗೆಸ್ಟ್ ಹೌಸ್ ಗಳದ್ದೇ ದರ್ಭಾರ್ ಆಗಿದ್ದು. ಈ ಕುರಿತು ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ಜರುಗಿದ ದಾಳಿ, ಕೇವಲ ಒಂದು ದಿನದ ದಾಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಹಂಪಿ ಹಾಗೂ ಕಮಲಾಪುರ ಭಾಗದಲ್ಲಿ ತಲೆ ಎತ್ತಿರುವ ಹೋಂ ಸ್ಟೇ, ವಸತಿ ಗೃಹಗಳು ಹಾಗೂ ಗೆಸ್ಟ್ ಹೌಸ್ ಗಳು ಬಹುತೇಕ ಅನಧಿಕೃತವಾಗಿವೆ. ಯಾವ ಹೋಂ ಸ್ಟೇ ಗಳು ಪ್ರವಾಸೋಧ್ಯಮ ಇಲಾಖೆಯಿಂದ ಪರವಾನಿಗೆ ಪಡೆದಿಲ್ಲ. ಇದನ್ನು ದಾಳಿ ನಡೆಸಿದ ಸಂದರ್ಭದಲ್ಲಿ ಕಂದಾಯ ಹಾಗೂ ಪ್ರವಾಸೋಧ್ಯಮ, ಹವಾಮ ಇಲಾಖೆಗಳ ಅಧಿಕಾರಿಗಳೇ ದೃಢಪಡಿಸಿದ್ದಾರೆ.

ಹಂಪಿ ಗ್ರಾಮ ಪಂಚಾಯಿತಿ ಕಛೇರಿ ಪಕ್ಕದಲ್ಲಿಯೇ ಸೋಮವಾರ ಎಸ್ಪಿ ಎಸ್.ಜಾಹ್ನವಿ ನೇತೃತ್ವದಲ್ಲಿ ಕಂದಾಯ, ಪ್ರವಾಸೋಧ್ಯಮ ಹಾಗೂ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ದಾಳಿ ನಡೆಸಿದ ಸಂದರ್ಭದಲ್ಲಿ ದಾಳಿ ಮಾಡಿದ ಯಾವ ಹೋಂ ಸ್ಟೇ, ವಸತಿ ಗೃಹ ಹಾಗೂ ಗೆಸ್ಟ್ ಹೌಸ್ ಗಳಿಗೆ ಪರವಾನಿಗೆ ಇರದಿರುವುದು ಕಂಡು ಬಂದಿದೆ. ಈ ತರಹ ಹಂಪಿ, ಕಮಲಾಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಾರು ಇವೆ. ಇದೆಲ್ಲಾ ಸ್ಥಳೀಯ ಹಂಪಿ ಗ್ರಾಮ ಪಂಚಾಯಿತಿ, ಪ್ರವಾಸೋಧ್ಯಮ ಇಲಾಖೆ, ಹವಾಮ ಇಲಾಖೆಗಳಿಗೆ ಮಾಹಿತಿ ಇದ್ದರೂ ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಯಾಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸಮನ್ವಯ ಕೊರತೆ ಕಾರಣ: ಹಂಪಿಯಲ್ಲಿ ಅನಧಿಕೃತ ಹೋಂ ಸ್ಟೇ, ವಸತಿ ಗೃಹಗಳು, ವಸತಿ ಗೃಹಗಳು ಈ ಮಟ್ಟಕ್ಕೆ ಬೆಳೆಯಲಿಕ್ಕೆ ಕಂದಾಯ, ಪ್ರವಾಸೋಧ್ಯಮ, ಹವಾಮ, ಕೇಂದ್ರ ಪುರಾತತ್ವ ಇಲಾಖೆಗಳ ಸಮನ್ವಯತೆ ಕೊರೆತೆಯೇ ಮೂಲ ಕಾರಣ ಎಂಬುದು ಮೇಲು ನೋಟಕ್ಕೆ ಕಂಡು ಬರುತ್ತಿದೆ. ಹಂಪಿಯಲ್ಲಿ 132 ಅನಧಿಕೃತ ಹೋಂ ಸ್ಟೇ ಗಳಿವೆ ಎಂಬುದನ್ನು ಸ್ವತಹ ಪ್ರವಾಸೋಧ್ಯಮ ಇಲಾಖೆ ಜಂಟಿ ನಿರ್ದೇಶಕ ಡಾ.ತಿಪ್ಪೇಸ್ವಾಮಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ಹಂಪಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಶೇ.99 ರಷ್ಟು ಹೋಂ ಸ್ಟೇಗಳು, ವಸತಿ ಗೃಹಗಳು ಹಾಗೂ ಗೆಸ್ಟ್ ಹೌಸ್ ಗಳು ಯಾವುದೇ ಪರವಾನಿಗೆ ಪಡೆಯದೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಹಶೀಲ್ದಾರ್ ಶೃತಿ ಎಂ.ಮಳ್ಳಪ್ಪ ಗೌಡ್ರು ತಿಳಿಸಿದ್ದಾರೆ.

ಹೋಂ ಸ್ಟೇ ಗಳಲ್ಲಿ, ವಸತಿ ಗೃಹಗಳಲ್ಲಿ, ಗೆಸ್ಟ್ ಹೌಸ್ ಗಳಲ್ಲಿ ಯಾವುದೇ ಸುರಕ್ಷಿತ ಕ್ರಮಗಳಿಲ್ಲ. ಇಲ್ಲಿ ತಂಗುವ ಪ್ರವಾಸಿಗರಿಗೆ ಯಾವುದೇ ರಕ್ಷಣೆಯಿಲ್ಲ ಎಂಬುದನ್ನು ಪ್ರವಾಸೋಧ್ಯಮ ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಿದ್ದರೂ, ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿರುವುದು ಯಾಕೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಹಂಪಿಯ ಹೋಂ ಸ್ಠೇ, ವಸತಿ ಗೃಹಗಳಲ್ಲಿ, ಗೆಸ್ಟ್ ಹೌಸ್ ಗಳಲ್ಲಿ ಅನಧಿಕೃತ ಚಟುವಟಿಕೆಗಳು ಕೂಡ ರಾಜಾರೋಷವಾಗಿ ನಡೆಯುತ್ತಿದ್ದು. ಈ ಬಗ್ಗೆ ಜಿಲ್ಲಾಡಳಿತ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕಾಗಿದೆ. ದಾಳಿ ಸಂದರ್ಭದಲ್ಲಿ ಪರವಾನಿಗೆ ಇಲ್ಲದೆ ನಡೆಸುತ್ತಿರುವ ಹೋಂ ಸ್ಟೇ ಗಳನ್ನು ಬಂದ್ ಮಾಡಲು ಎಸ್ಪಿ ಎಸ್.ಜಾಹ್ನವಿ ಅವರು ಸೂಚಿಸಿರುವುದನ್ನು ಸ್ವಾಗತಿಸಿರುವ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು,  ಈ ದಾಳಿ ತೋರಿಕೆಗೆ ಆಗದಿರಲಿ. ಹಂಪಿಯಲ್ಲಿ ತಲೆ ಎತ್ತಿರುವ ಅನಧಿಕೃತ ಹೋಂ ಸ್ಟೇ, ವಸತಿ ಗೃಹ ಹಾಗೂ ಗೆಸ್ಟ್ ಹೌಸ್ ಗಳನ್ನು ಕಾನೂನು ವ್ಯಾಪ್ತಿಗೆ ಒಳಪಡಿಸಲಿ, ಹಂಪಿಯಲ್ಲಿ ನಡೆಯುತ್ತಿರುವ ಅನಧಿಕೃತ ಚಟುವಟಿಕೆಗಳಿಗೆ ಕಡಿವಾಣ ಹಾಕಲಿ ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸರು ಮತ್ತು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.