ಹಂಪಿ ವಿಠ್ಠಲ ದೇವಾಲಯ ಮುಂದೆ ಅಕ್ಕ ಕ್ಯಾಂಟಿನ್‍ಗೆ ಚಾಲನೆ

ಸಂಜೆವಾಣಿ ವಾರ್ತೆ

ಹೊಸಪೇಟೆ ಜ1: ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಚಾರಿ ಅಕ್ಕ ಕ್ಯಾಂಟಿನ್ ನ್ನು ವಿಶ್ವವಿಖ್ಯಾತ ಹಂಪಿಯ ವಿಜಯ ವಿಠಲ ದೇವಸ್ಥಾನದ ಮುಂಭಾಗದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಕೆ.ತಿಮ್ಮಪ್ಪ ಅವರು ಬುಧವಾರ ಚಾಲನೆ ನೀಡಿದರು.

ಜಿ.ಪಂ., ತಾ.ಪಂ. ಹೊಸಪೇಟೆ, ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಶ್ರೀಜಗನ್ ಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಹಂಪಿ ವತಿಯಿಂದ ಸಂಚಾರಿ ಅಕ್ಕ ಕ್ಯಾಂಟಿನ್‍ಗೆ ಚಾಲನೆ ನೀಡಿ ಅವರು ಮಾತನಾಡಿ, ವಿಶ್ವ ವಿಖ್ಯಾತ ಹಂಪಿ ಹಾಗೂ ವಿಜಯ ವಿಠಲ ದೇವಸ್ಥಾನ ವೀಕ್ಷಣೆಗೆ ಬರುವ ವಿವಿಧ ರಾಜ್ಯ ಸೇರಿದಂತೆ ವಿದೇಶಿ ಪ್ರವಾಸಿಗರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತಾರು. ದೇವಸ್ಥಾನ ವೀಕ್ಷಣೆ ಹಾಗೂ ದೇವರ ದರ್ಶನ ಪಡೆಯಲು ಬರುವ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಒಲವಿನ ಊಟ ಸಿಗುವುದು ಕಷ್ಟ ಸಾಧ್ಯ. ಹಂಪಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಜಯ ವಿಠಲ ದೇವಸ್ಥಾನ ಮುಂಭಾಗದಲ್ಲಿ ಮೊಬೈಲ್ ಕ್ಯಾಂಟಿನ್ ವ್ಯವಸ್ಥೆ ಕಲ್ಪಿಸಿದ್ದರಿಂದ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ಸ್ವಸಹಾಯ ಗುಂಪಿನ ಮಹಿಳೆಯರ ಕುಟುಂಬಗಳಿಗೆ ಹೆಚ್ಚಿನ ಆದಾಯ ವೃದ್ಧಿಯಾಗಿ ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗುತ್ತದೆ ಎಂದ ಅವರು, ಶುಚಿರುಚಿಯಾದ ಗುಣಮಟ್ಟದ ಉಪಹಾರ ನೀಡುವಂತೆ ಮೊಬೈಲ್ ಕ್ಯಾಂಟಿನ್ ಅಡುಗೆ ಸಿಬ್ಬಂದಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿ.ಪಂ. ಸಹಾಯಕ ಯೋಜನಾ ಅಧಿಕಾರಿ ಉಮೇಶ್, ಹೊಸಪೇಟೆ ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಅಲಂ ಭಾಷಾ, ಜಿಪಂ ಅಧೀಕ್ಷಕ ನಾಗರಾಜ್, ಜಿಲ್ಲಾ ಯೋಜನಾ ವ್ಯವಸ್ಥಾಪಕ ಪ್ರಸನ್ನ, ಜಿಲ್ಲಾ ವ್ಯವಸ್ಥಾಪಕಿ ಕಲಾವತಿ ಸೇರಿದಂತೆ ಮಹಿಳಾ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.