
ಪುತ್ತೂರು; ಒಂದು ಕಾಲದಲ್ಲಿ ಮನೆಯೊಳಗೇ ಬಂಧಿಯಾಗಿರುತ್ತಿದ್ದ ಮಹಿಳೆಯರಿಗೆ ಈಗ ಅಂತಹ ಸ್ಥಿತಿ ಇಲ್ಲ. ಸಾಮಾಜಿಕವಾಗಿ ಸಾಕಷ್ಟು ಕೆಲಸಗಳನ್ನು ಮಾಡುತ್ತಿದ್ದಾರೆ. ಆರ್ಥಿಕ ಸಬಲೀಕರಣ ಸಾಧಿಸಿ ಕುಟುಂಬಕ್ಕೆ ಶಕ್ತಿಯಾಗಿ ಬದುಕುತ್ತಿದ್ದಾರೆ. ತಾವೇ ಉದ್ಯಮಗಳನ್ನು ಸ್ಥಾಪಿಸಿಕೊಂಡು ಸಾಕಷ್ಟು ಮಂದಿಗೆ ಉದ್ಯೋಗಾಶ್ರಯ ನಿರ್ಮಿಸಿಕೊಟ್ಟಿದ್ದಾರೆ. ಆ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ನಿಂತು ಇತರರಿಗೆ ಮಾದರಿಯಾಗಿದ್ದಾರೆ. ಪುತ್ತೂರಿನ ಮಹಿಳೆಯೊಬ್ಬರು ಚಿಕ್ಕದೊಂದು ಸ್ವ ಉದ್ಯೋಗ ಪ್ರಾರಂಭಿಸಿ ಈಗ ‘ಕೋಟಿ’ ವ್ಯವಹಾರದ ಸಾಧನೆ ಮಾಡಿದ್ದಾರೆ.

ಪುತ್ತೂರಿನ ಕೋಡಿಂಬಾಡಿಯಲ್ಲಿ ಕಳೆದ ೭ ವರ್ಷಗಳ ಹಿಂದೆ ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಸದಸ್ಯೆಯಾಗಿದ್ದ ಪವಿತ್ರಾ ಈಗ ವಾರ್ಷಿಕವಾಗಿ ಕೋಟಿ ವ್ಯವಹಾರ ನಡೆಸುವ ಮಹಿಳಾ ಉದ್ಯಮಿ. ಬೇಕರಿ ತಿಂಡಿಗಳನ್ನು ಮಾಡುವ ಮೂಲಕ ಸ್ವ ಉದ್ಯೋಗಕ್ಕೆ ಕಾಲಿಟ್ಟ ಈಕೆ ಈಗ ಅದೇ ಉದ್ಯಮವನ್ನು ಬೃಹತ್ ಆಗಿ ಬೆಳೆಸುವ ಮೂಲಕ ೧೦ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ್ದಾರೆ. ಇದರಲ್ಲಿ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಹೆಚ್ಚಿನ ಪಾಲು ನೀಡಿದ್ದಾರೆ. ಆ ಮೂಲಕ ಮಹಿಳೆ ಮನಸ್ಸು ಮಾಡಿದರೆ ನಾವೂ ಉತ್ತಮ ಉದ್ಯಮಿಗಳಾಗಬಹುದು ಎಂಬುವುದನ್ನು ಸಾಬೀತು ಮಾಡಿದ್ದಾರೆ.
ಸ್ವಂತ ಉದ್ಯೋಗದ ಕನಸು ಕಂಡ ಪವಿತ್ರಾ ಸಂಜೀವಿನಿ ಒಕ್ಕೂಟದಿಂದ ಮೊದಲಿಗೆ ೭೫ ಸಾವಿರ ಸಾಲ ಪಡೆಯುತ್ತಾರೆ. ಇದರಿಂದ ಪುಟ್ಟದಾದ ಬೇಕರಿ ತಿಂಡಿಗಳ ಘಟಕವೊಂದು ನಿರ್ಮಾಣವಾಗುತ್ತದೆ. ಬೇಕರಿ ತಿಂಡಿಗಳಿಗೆ ಸಾಕಷ್ಟು ಬೇಡಿಕೆ ಇರುವುದನ್ನು ಕಂಡುಕೊಂಡ ಅವರು ಪಿಎಮ್‌ಎಫ್‌ಎಮ್ ಮೂಲಕ ಮತ್ತೆ ೪೦ ಸಾವಿರ ಸಾಲ ಪಡೆದು ಬೇಕರಿ ಐಟಂಗಳಿಗೆ ಅಗತ್ಯವಾದ ಪರಿಕರಗಳನ್ನು ಖರೀದಿ ಮಾಡುತ್ತಾರೆ. ಉದ್ಯಮ ಕೈಗೆಟಕುತ್ತದೆ ಎಂಬುವುದು ಸ್ಪಷ್ಟವಾದಾಗ ದೊಡ್ಡ ಮಟ್ಟದ ಸಾಲ ಪಡೆದುಕೊಂಡು ಉದ್ಯಮವನ್ನು ಮತ್ತಷ್ಟು ವಿಸ್ತಾರ ಮಾಡುತ್ತಾರೆ. ಇದಕ್ಕೆ ಇವರ ಪತಿ ಶೇಖರ್ ಬೆಂಗಾವಲಾಗಿ ನಿಲ್ಲುತ್ತಾರೆ. ಪುತ್ತೂರಿನ ರೈಲ್ವೇ ಸ್ಟೇಶನ್ ಬಳಿಯಲ್ಲಿ ಫ್ರೆಂಡ್ಸ್ ಹೆಸರಿನ ಬೇಕರಿ ಹಾಗೂ ತಿಂಡಿಗಳನ್ನು ಮಾಡುವ ಘಟಕವನ್ನೂ ಮಾಡುತ್ತಾರೆ. ಸುಳ್ಯ, ಕಡಬ, ಬೆಳ್ತಂಗಡಿ ಮತ್ತಿತರ ಕಡೆಗಳಿಗೆ ದಿನನಿತ್ಯ ಬೇಕರಿ ತಿನಿಸುಗಳನ್ನು ಸರಬರಾಜು ಮಾಡುವ ಜತೆಗೆ ತಮ್ಮದೇ ಆದ ೫ ಬೇಕರಿ ಶಾಖೆಗಳನ್ನು ಮಾಡಿದ್ದಾರೆ. ದಿನವೊಂದಕ್ಕೆ ೩ ಕ್ವಿಂಟಾಲ್ ಗೂ ಅಧಿಕ ಬೇಕರಿ ತಿನಿಸುಗಳು ಮಾರಾಟ ಮಾಡುತ್ತಿರುವ ಪವಿತ್ರಾ ಈಗ ವಾರ್ಷಿಕವಾಗಿ ಹಲವು ಕೋಟಿಗಳ ವ್ಯವಹಾರ ಮಾಡುತ್ತಿದ್ದಾರೆ.
ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದ ಕೋಡಿಂಬಾಡಿಯ ಪವಿತ್ರಾ ಅವರ ಉದ್ಯಮದ ಯಶಸ್ಸು ಅವರ ಕನಸು ಮತ್ತು ಶ್ರಮದ ಫಲವಾಗಿದೆ. ಸಂಜೀವಿನ ಸ್ವಸಹಾಯ ಗುಂಪಿನ ಮಹಿಳಾ ಸದಸ್ಯರು ಸ್ವ ಉದ್ಯೋಗದ ಚಿಂತನೆ ಮಾಡುವವರಿಗೆ ಇವರೊಂದು ಸ್ಪೂರ್ತಿಯಾಗಿದ್ದಾರೆ. ಇಂತಹ ಪ್ರಯತ್ನಗಳು ನಡೆದಾಗ ಹಲವು ಮಹಿಳೆಯರು ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂಬುವುದಕ್ಕೆ ಅವರು ಉದಾಹರಣೆಯಾಗಿದ್ದಾರೆ. ಡೆಎನ್‌ಆರ್‌ಎಲ್‌ಎಮ್ ಯೋಜನೆ ಮೂಲಕ ಇನ್ನಷ್ಟು ಮಹಿಳೆಯರು ಸಾಧನೆಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕು ಎನ್ನುತ್ತಾರೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ವಲಯ ಮೇಲ್ವಿಚಾರಕಿ ನಮಿತಾ.
ಶ್ಲಾಘನೀಯ ಸಾಧನೆ
ಸ್ವಸಹಾಯ ಸಂಘದ ಮೂಲಕ ಉದ್ಯಮದ ಕನಸು ಕಂಡು ಈಗ ಯಶಸ್ವೀ ಉದ್ಯಮಿಯಾಗಿರುವ ಪವಿತ್ರಾ ಅವರ ಸಾಧನೆ ಉಳಿದ ಮಹಿಳೆಯರಿಗೆ ದಾರಿದೀಪದ ಮಾದರಿಯಾಗಿದೆ. ಸ್ವಸಹಾಯ ಸಂಘಗಳ ಬಲವರ್ಧನೆಗಾಗಿ ರಾಜ್ಯ-ಕೇಂದ್ರ ಸರ್ಕಾರಿಗಳು ಹಲವಾರು ಯೋಜನೆಗಳನ್ನು ತಂದಿವೆ. ಕೇಂದ್ರ ಪುರಸ್ಕೃತ ದೀನ್ ದಯಾಲ್ ಅಂತ್ಯೋದಯ ಯೋಜನೆಯಡಿಯಲ್ಲಿ ಸಂಜೀವಿನಿ ಮೂಲಕ ಅವರು ಸ್ವ ಉದ್ಯೋಗ ಆರಂಭಿಸುವ ಜತೆಗೆ ತಮ್ಮ ಒಕ್ಕೂಟದ ಸದಸ್ಯರಿಗೆ ಉದ್ಯೋಗವನ್ನೂ ಕೊಟ್ಟಿದ್ದಾರೆ. ಆ ಮೂಲಕ ಪ್ರತಿಯೊಬ್ಬ ಮಹಿಳೆಯೂ ತಮ್ಮ ಆರ್ಥಿಕ ಸಬಲತೆ ಸಾಧಿಸಲು ಸಾಧ್ಯ ಎಂದು ನಿರೂಪಿಸಿದ್ದಾರೆ- ಜಗತ್ ಕಾರ್ಯಕ್ರಮ ವ್ಯವಸ್ಥಾಪಕರು. ದೀನ್ ದಯಾಳ್ ಅಂತ್ಯೋದಯ ಯೋಜನೆ.
ಮೇಘಾ ಪಾಲೆತ್ತಾಡಿ
































