ಸ್ಮಾರ್ಟ್ ಮೀಟರ್ ಹಗರಣ ಸತ್ಯಕ್ಕೆ ದೂರವಾದುದು

ಸಂಜೆವಾಣಿ ನ್ಯೂಸ್
ಮೈಸೂರು: ಜೂ.04:
– ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಸ್ಮಾರ್ಟ್ ಮೀಟರ ಅಳವಡಿಸುವುದರಿಂದ 15,568 ಕೋಟಿ ರೂ ಹಗರಣ ಮಾಡುತ್ತಿದೆ ಎಂದು ಬಿಜೆಪಿ-ಜೆಡಿಎಸ್ ನಾಯಕರು ಹೇಳುತ್ತಾರೆ. ಇದರ ಒಟ್ಟು ವೆಚ್ಚವೇ 1568 ಕೋಟಿ,ರೂ. ಆದರೆ 15,568 ಕೋಟಿ ರೂ ಎಲ್ಲಿಂದ ಬಂತು. ಇದು ಅವರ ದಿವಾಳಿತನ ತೋರಿಸುತ್ತದೆ ಎಂದು, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಟೀಕಿಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2019ರಲ್ಲಿ ಬಿಜೆಪಿ ಸರಕಾರ ಈ ಸ್ಮಾರ್ಟ್ ಮೀಟರ್ ಯೋಜನೆಯನ್ನು ದೇಶಾದ್ಯಂತ ಜಾರಿ ಮಾಡಿತು. ಬಿಜೆಪಿ ನಾಯಕರು ಹೇಳುತ್ತಿರುವ ಸ್ಮಾರ್ಟ್ ಮೀಟರ ಹಗರಣದ ಕೀರ್ತಿ ನಿಮಗೆ ಸಲ್ಲಬೇಕು ಎಂದು ಆರೋಪಿಸಿದರು.


ಸ್ಮಾರ್ಟ್ ಮೀಟರ್‍ನಿಂದ ವಿದ್ಯುತ್ ಸೋರಿಕೆ, ವಿದ್ಯುತ್ ಕಳ್ಳತನ, ಅಧಿಕ ಬಿಲ್ ತಡೆಯುವುದು ಮುಖ್ಯ ಉದ್ದೇಶ. ದೇಶದಲ್ಲಿ 28 ರಾಜ್ಯಗಳು ಹಾಗೂ 9 ಯೂನಿಯನ್ಸ್‍ಗಳ ಪೈಕಿ ಕರ್ನಾಟಕ ಮತ್ತು ತೆಲಂಗಾಣ ಬಿಟ್ಟು ಎಲ್ಲಾ ರಾಜ್ಯಗಳು ಈಗಾಗಲೇ ಸ್ಮಾರ್ಟ್ ಮೀಟರ್‍ಗಳನ್ನು ಅಳವಡಿಸಿಕೊಂಡಿವೆ ಎಂದು ಹೇಳಿದರು.


ರಾಜ್ಯದಲ್ಲಿ ನಾಲ್ಕು ಲಕ್ಷ ಮೀಟರ್‍ಗಳನ್ನು ಹೊಸದಾಗಿ ನಿರ್ಮಿಸಿರುವ ಮನೆಗಳಿಗೆ ಮಾತ್ರ ಅಳವಡಿಸಲಾಗುತ್ತಿದೆ. ಜನರಿಂದ ಯಾವ ರೀತಿಯ ಸ್ಪಂದÀನೆ ಬರುತ್ತದೆ ಎಂದು ತಿಳಿದುಕೊಳ್ಳಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಹೊಸದಾಗಿ ಎರಡು ಲಕ್ಷ ಮನೆಗಳಾಗಿದ್ದು, ನಗರಸಭೆ, ಪುರಸಭೆ, ಪಂಚಾಯಿತಿಗಳಿಂದ ಈ ಮನೆಗಳು ಪೂರ್ಣಗೊಂಡಿವೆ ಎಂದು ಇನ್ನು ಗುರುತಿಸಿಲ್ಲ. ಅವುಗಳಿಗೆ ಈ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.


ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಒಂದು ಸ್ಮಾರ್ಟ್ ಮೀಟರ್‍ಗೆ 4,998 ರೂ ಗಳನ್ನು ಮಾತ್ರ ಪಡೆಯುತ್ತಿದೆ. ಇದರಿಂದ ನಾವು ತಿಂಗಳಿಗೆ 75 ರೂ ಮಾತ್ರ ಬಿಲ್ ನೀಡಲಾಗುತ್ತದೆ. ಇದನ್ನು ಹೊಸಮನೆಗಳಿಗೆ ಮಾತ್ರ ಅಳವಡಿಸಲಾಗುತ್ತಿದ್ದು, ಬೇರೆ ಮನೆಗಳಿಗೂ ಬೇಕು ಎಂದರೆ ಮಾತ್ರ ಅಳವಡಿಸಲಾಗುತ್ತದೆ ಎಂದು ತಿಳಿಸಿದರು.


ರಾಜ್ಯದಲ್ಲಿ ಸ್ಮಾರ್ಟ್ ಮೀಟರಗಳಿಗಾಗಿ ಗುತ್ತಿಗೆ ಕರೆಯಲಾಗಿದ್ದು ಈ ಪೈಕಿ ಮೂರು ಕಂಪನಿಗಳನ್ನು ತಿರಸ್ಕರಿಸಲಾಗಿದೆ. ರಾಜಶ್ರೀ ಎಲೆಕ್ಟ್ರಿಕಲ್ಸ್ ಅವರಿಗೆ ನೀಡಲಾಗಿದೆ. ಆದರೆ, ಸೈಯಾದ್ ಎಲೆಕ್ಟ್ರಿಕಲ್ಸ್ ಕಂಪನಿ ಗುತ್ತಿಗೆಯಿಂದ ತಿರಸ್ಕಾರವಾಗುತ್ತಿದಂತೆ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಮಾಧ್ಯಮಗಳ ಮುಂದೆ ಕುಳಿತು ಸ್ಮಾರ್ಟ್ ಮೀಟರ್ ಬೇಡ ಎಂದು ಹೇಳುತ್ತಿರೋದು ಯಾಕೆ? ನಿಮಗೂ ಈ ಕಂಪನಿಗೂ ಏನು ಸಂಬಂಧ? ಇದರ ಬಗ್ಗೆ ಜನರಿಗೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.


ನಮ್ಮ ಸರಕಾರದ ಮೇಲೆ ಕಮಿಷನ್ ಆರೋಪ ಮಾಡುತ್ತಿರುವ ಬಿಜೆಪಿಯವರು ಬಹುತೇಕ ಬೇರೆ ರಾಜ್ಯಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಸಲು ಗುತ್ತಿಗೆ ಪಡೆದು ಬಹುದೊಡ್ಡ ಹಗರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಈ ರಾಜ್ಯದಲ್ಲಿ ಬಿಜೆಪಿಯವರಿಗೆ ಬೇಕಾಗಿರೋದು ಕೋಮುವಾದ. ಹಿಂದೂ ಮುಸ್ಲಿಂ ಅವರ ನಡುವೆ ಜಗಳ ಸೃಷ್ಟಿಸೋದು ವಿನಹ ಬೇರೇನು ಇಲ್ಲ. ಬಿಜೆಪಿಯ ಎಲ್ಲ ಶಾಸಕರು ಮುಸ್ಲಿಂಗಳೊಂದಿಗೆ ವ್ಯವಹಾರ ಮಾಡುತ್ತಾರೆ. ಆದರೆ ಮಾಧ್ಯಮದ ಮುಂದೆ ಬಂದು ಅವರಿಗೆ ಬೈಯ್ಯುತ್ತಾರೆ. ರಾಜ್ಯದಲ್ಲಿ ಮೇಕೆದಾಟು, ಮಹದಾಯಿ,ತುಂಗಭದ್ರ ಯೋಜನೆಗಳಿಗೆ ಇಲ್ಲಿಯವರೆಗೂ ಸರಿಯಾದ ನಿರ್ಧಾರ ಕೈಗೊಂಡಿಲ್ಲ ಎಂದು ಹರಿಹಾಯ್ದರು.


ರಾಜ್ಯದಲ್ಲಿ ಶಾಂತಿ ಕಾಪಾಡಲು ಕರಾವಳಿ ಭಾಗದಲ್ಲಿರುವ ಬಿಜೆಪಿ ಶಾಸಕರನ್ನು ಯು.ಪಿ ಎ.ಪಿ ಕಾಯ್ದೆಯಡಿ ಗಡಿಪಾರು ಮಡಬೇಕು ಎಂದು ಒತ್ತಾಯಿಸಿದರು.
ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ನಟ ಕಮಲ್ ಹಾಸನ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಕಮಲ್ ಹಾಸನ್ ಹೇಳಿಕೆ ದುರಂತದ ಸಂಗತಿ. ಅವರು ಕನ್ನಡಿಗರಿಗೆ ಕ್ಷಮೆ ಕೇಳಲೇ ಬೇಕು ಎಂದು ಹೇಳಿದರು.