
ಪುತ್ತೂರು; ಅಡಿಕೆ ರೈತರ ಹಿತಾಸಕ್ತಿಯ ರಕ್ಷಣೆಗೆಂದೇ ಆರಂಭಗೊಂಡ ಕರ್ನಾಟಕ ಮತ್ತು ಕೇರಳದ ಆಶ್ರಯಿತ ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರ ಆಯ್ಕೆಗೆ ನ.೨೩ರಂದು ಚುನಾವಣೆ ನಡೆಯಲಿದ್ದು, ಈ ಸಂಸ್ಥೆ ಮತ್ತೊಂದು ಎಸ್‌ಕೆಸಿಎಂಎಸ್ ರೀತಿಯಲ್ಲಿ ಅಧ;ಪತನವಾಗದಂತೆ ಮಾಡಲು ಮತದಾರರು ಮುಂದಾಗಬೇಕಾಗಿದೆ. ಪ್ರಸ್ತುತ ಕೋಟಿಗಟ್ಟಲೆ ನಷ್ಟ ತೋರಿಸುತ್ತಿರುವ ಈ ಸಂಸ್ಥೆಯ ಸ್ಥಾಪಿತ ಹಿತಾಸಕ್ತಿಗಳ ಮೇಲೆ ಹದ್ದಿನ ಕಣ್ಣು ಇರಿಸುವ ಸಲುವಾಗಿ ಇಬ್ಬರು ಸಹಕಾರಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂ.ಜಿ ಸತ್ಯನಾರಾಯಣ ಹಾಗೂ ರಾಮಪ್ರತೀಕ್ ಎಂಬವರಿಗೆ ಮತನೀಡುವ ಮೂಲಕ ಕ್ಯಾಂಪ್ಕೋ ಸಂಸ್ಥೆಯನ್ನು ಆರೋಗ್ಯಪೂರ್ಣವಾಗಿ ಬೆಳೆಸಲು ಮುಂದಾಗಬೇಕು ಎಂದು ಹಿರಿಯ ಸಹಕಾರಿ ಮಾಜಿ ಎಂಎಲ್‌ಸಿ ಅಣ್ಣಾ ವಿನಯಚಂದ್ರ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ವಾರಣಾಸಿ ಸುಬ್ರಾಯ ಭಟ್ ಅವರು ಕಂಡ ಕನಸು ಇದೀಗ ಇಬ್ಬರು ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿಕೊಂಡಿದೆ. ಅದರಿಂದ ಸಂಸ್ಥೆಯನ್ನು ರಕ್ಷಣೆ ಮಾಡಬೇಕಾದರೆ ಸರಿಯಾದ ವ್ಯಕ್ತಿಗಳ ನಿರ್ದೇಶಕರಾಗಿ ಆಯ್ಕೆಯಾಗಬೇಕಾಗಿದೆ. ಚುನಾವಣೆಯೇ ಆಗದಂತೆ ನೋಡಿಕೊಂಡು ತಾವು ಹೇಳಿದವರು ಅಧ್ಯಕ್ಷ-ನಿರ್ದೇಶಕರನ್ನಾಗಿ ಮಾಡುವ ಈ ಇಬ್ಬರು ವ್ಯಕ್ತಿಗಳು ತಾವೇ ಸಹಕಾರಿಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಆ ಮೂಲಕ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೊವನ್ನು ನಷ್ಟದ ಕೂಪಕ್ಕೆ ತಳ್ಳುವ ಕೆಲಸ ನಡೆಸುತ್ತಿದ್ದಾರೆ. ಈ ಹಿಂದೆ ದಕ್ಷಿಣ ಕನ್ನಡ ಕೃಷಿಕರ ಸಹಕಾರಿ ಮಾರಾಟ ಸಂಘ (ಎಸ್‌ಕೆಸಿಎಂಎಸ್) ಅತ್ಯತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಸಂಘಕ್ಕೆ ಮಂಗಳೂರು ಮತ್ತು ಪುತ್ತೂರಿನ ಹೃದಯಭಾಗದಲ್ಲಿ ಸ್ವಂತ ಜಮೀನು ಇತ್ತು. ಇಂತಹ ಸಹಕಾರಿ ಸಂಘವನ್ನು ಬೀದಿಪಾಲು ಮಾಡಿರುವ ಈ ಕುಖ್ಯಾತ ಸಹಕಾರಿ ಧುರೀಣರು ಇದೀಗ ಕ್ಯಾಂಪ್ಕೊ ಸಂಸ್ಥೆಯನ್ನು ಬೀದಿಪಾಲು ಮಾಡಲು ಮುಂದಾಗಿದ್ದಾರೆ. ಇದನ್ನು ತಡೆಯದೆ ಹೋದಲ್ಲಿ ಅಡಿಕೆ ರೈತರ ಏಕೈಕ ಸಹಕಾರಿ ಸಂಸ್ಥೆ ಮುಳುಗಡೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಕಳೆದ ಎರಡು ದಶಕಗಳಿಂದ ಕೆಲ ಸ್ಥಾಪಿತ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದೆ. ಅವರ ಕಪಿಮುಷ್ಠಿಯಲ್ಲಿ ನಷ್ಟ ಎಂಬ ನೆಪದಲ್ಲಿ ಸಾಗುತ್ತಿದೆ. ಅಡಿಕೆ ಧಾರಣೆ ಉತ್ತಮವಾಗಿರುವಾಗ ಕ್ಯಾಂಪ್ಕೊ ಸಂಸ್ಥೆ ಯಾಕೆ ನಷ್ಟ ತೋರಿಸುತ್ತಿದೆ. ಚಾಕಲೇಟ್ ಕಾರ್ಖಾನೆಯಲ್ಲಾಗುವ ಲಾಭವನ್ನು ಸರಿಹೊಂದಿಸಿಕೊಂಡು ಕ್ಯಾಂಪ್ಕೊ ಲಾಭದಲ್ಲಿದೆ ಎಂಬುವುದನ್ನು ಈ ಸ್ವಾರ್ಥ ಸಾಧಕರು ಮಾಡುತ್ತಿದ್ದಾರೆ. ಸಹಕಾರ ಭಾರತಿ ಪ್ರಾಯೋಜಿತ ಎಂದು ಹೇಳಿಕೊಂಡು ಸಹಕಾರಿ ಸಂಸ್ಥೆಯನ್ನು ಅಧ;ಪತನದತ್ತ ದೂಡುತ್ತಿದ್ದಾರೆ. ಇದನ್ನು ತಡೆಯಲೇ ಬೇಕು. ಈ ಹಿನ್ನಲೆಯಲ್ಲಿ ಮತದಾರರು ಚಿಂತನೆ ನಡೆಸಬೇಕಾಗಿದೆ ಎಂದರು.
ಸರ್ಕಾರಿ ಹಿಡಿತ ಅಗತ್ಯ..
ಹಿಂದೆ ಕ್ಯಾಂಪ್ಕೋ ಸಂಸ್ಥೆಗೆ ಸರ್ಕಾರದ ಹಿಡಿತ ಇತ್ತು. ಈಗ ಇದನ್ನು ಸಂಪೂರ್ಣವಾಗಿ ಖಾಸಗಿಮಯಗೊಳಿಸಲಾಗಿದೆ. ಹಾಗಾಗಿ ಇವರನ್ನು ಕೇಳುವವರು ಇಲ್ಲದಂತಾಗಿದೆ. ಬೇರೆ ಬೇರೆ ವಿಧಾನಗಳಿಂದ ಸಂಸ್ಥೆಯ ಹಣ ಸ್ವಾರ್ಥಿಗಳ ಖಜಾನೆ ತುಂಬುತ್ತಿದೆ. ಅಡಿಕೆ ವ್ಯವಹಾರದಲ್ಲಿ ನಷ್ಟ ಎಂದು ನೆಪ ಹೇಳಿ ಸದಸ್ಯರಿಗೆ ಕನಿಷ್ಟ ಡಿವಿಡೆಂಟ್ ನೀಡುವುದಕ್ಕೂ ತಡೆ ಹಾಕಲಾಗಿದೆ. ಲಕ್ಷಗಟ್ಟಲೆ ಷೇರುದಾರರಿರುವ ಸಹಕಾರಿ ಸಂಸ್ಥೆಯಲ್ಲಿ ಜಿಲ್ಲೆಯ ಇಬ್ಬರು ವ್ಯಕ್ತಿಗಳು ಹೇಳಿದ್ದೇ ಕಾನೂನು ಆಗಿದೆ. ಅವರು ಹೇಳಿದವರು ಅಧ್ಯಕ್ಷರಾಗುತ್ತಾರೆ. ಸಂಸ್ಥೆಯ ಹಣವನ್ನು ದೋಚುವ ವ್ಯವಸ್ಥೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದನ್ನು ತಡೆಯಲು ಸರ್ಕಾರದ ಹಿಡಿತ ಅಗತ್ಯ ಇತ್ತು ಎಂದವರು ಹೇಳಿದರು.
ಪತ್ರಕರ್ತ ಹಾಗೂ ಅಖಿಲ ಕರ್ನಾಟಕ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಕ್ಯಾಂಪ್ಕೋ ಸಂಸ್ಥೆಯ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಇವರಿಗೆ ವ್ಯಕ್ತವಾದ ವ್ಯಾಪಕ ಬೆಂಬಲ ಗಮನಿಸಿ ಅವರನ್ನು ಸ್ಪರ್ಧೆಯಿಂದ ತಪ್ಪಿಸಲು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಲಾಯಿತು. ಸಂಸ್ಥೆಯನ್ನು ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಜಿಲ್ಲೆಯ ಇಬ್ಬರು ವ್ಯಕ್ತಿಗಳು ನಡೆಸಿದ ಕರಾಮತ್ತು, ಒತ್ತಡ ಬೆದರಿಕೆಗಳಿಂದ ಅವರು ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಯಿತು. ನಾವು ಹೇಳಿದ್ದಕ್ಕೆ ತಲೆ ಅಲ್ಲಾಡಿಸುವವರನ್ನು ಬಿಟ್ಟು ಮತ್ಯಾರೂ ಈ ಸಂಸ್ಥೆಗೆ ನಿರ್ದೇಶಕರಾಗಬಾರದು ಎಂಬ ಹಿನ್ನೆಲೆಯಲ್ಲಿ ತಂತ್ರಗಾರಿಕೆ ನಡೆಸಲಾಗುತ್ತಿದೆ. ಹಿಂದೆ ಎಸ್‌ಕೆಸಿಎಂಎಸ್ ನಲ್ಲೂ ಇದೇ ರೀತಿ ಮಾಡಲಾಗಿತ್ತು. ಸುಮಾರು ೮ ಕೋಟಿ ಹಣ ಗುಳುಂ ಮಾಡಲಾಗಿದೆ. ಪುತ್ತೂರಿನ ಸ್ವಂತ ಜಮೀನನ್ನು ಮಾರಾಟ ಮಾಡಲು ತಂತ್ರಗಾರಿಕೆ ಮಾಡಲಾಗಿತ್ತು. ಆದರೆ ಅದರ ವಿರುದ್ಧ ನಾವು ನಿಂತ ಹಿನ್ನಲೆಯಲ್ಲಿ ಇದೀಗ ಪ್ರಕರಣ ಹೈಕೋರ್ಟಿನಲ್ಲಿದೆ ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಅಡಿಕೆ ಬೆಳೆಗಾರ ಮೂಲಚಂದ್ರ, ಸಾವಯವ ಕೃಷಿಕ ಸುಬ್ರಾಯ ಮತ್ತು ಶ್ರೀಧರ ಶೆಟ್ಟಿ ಬೈಲಗುತ್ತು ಇದ್ದರು.




























