
ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ವ್ಯವಹಾರ ನಿರ್ವಹಣಾ ವಿಭಾಗದಿಂದ ‘ನ್ಯೂ ಏಜ್ ಇನ್ಕ್ಯೂಬೇಶನ್ ನೆಟ್ವರ್ಕ್ ಸ್ಟಾರ್ಟ್‌ಅಪ್ ಕರ್ನಾಟಕ’ ರಾಜ್ಯ ಸರ್ಕಾರದ ಮುಂದಾಳತ್ವದ ಸಹಯೋಗದಲ್ಲಿ ‘ಸ್ಟಾರ್ಟ್‌ಅಪ್ ಸ್ಪಿಯರ್ ಎಂಬ ಉದ್ಯಮಶೀಲತಾ ಸಮಾವೇಶ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಅವರು ಮಾತನಾಡಿ, ಅವರು ವಿದ್ಯಾರ್ಥಿಗಳು ತಮ್ಮ ಆರಾಮ ವಲಯದಿಂದ ಹೊರಬಂದು ತಮ್ಮ ವ್ಯವಹಾರ ಕಲ್ಪನೆಗಳ ಮೇಲೆ ಶ್ರಮಿಸಬೇಕು. ಉದ್ಯಮಶೀಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ ಎಂದರು.
ಕಾರ್ಯಕ್ರಮವನ್ನು ಉದ್ಯಮಿ ಮುರಳೀಧರ್ ಕೆ. ಉದ್ಘಾಟಿಸಿ ಇಂದಿನ ತೀವ್ರ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನದ ಯಶಸ್ಸಿಗೆ ಪರಿಣಾಮಕಾರಿ ಮಾರುಕಟ್ಟೆ ತಂತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ನಂತರ ನಡೆದ ಪ್ಯಾನೆಲ್ ಚರ್ಚೆಯಲ್ಲಿ ವಿವಿಧ ಕ್ಷೇತ್ರಗಳ ಉದ್ಯಮ ತಜ್ಞರು ತಮ್ಮ ಅನುಭವಾಧಾರಿತ ವಿಚಾರಗಳನ್ನು ಹಂಚಿಕೊಂಡರು.
ಆಕರ್ಷಣ್ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕ ಮೊಹಮ್ಮದ್ ಸಾಧಿಕ್, ಕೋಸ್ಟಲ್ ಕೊಕೊನಟ್ ಇಂಡಸ್ಟ್ರೀಸ್ ಸಂಸ್ಥೆಯ ಡೆನ್ನಿಸ್ ಮಸ್ಕರೇನಸ್, ಅಮೃತಾ ಸ್ಟೋರ್ಸ್ ಸಂಸ್ಥೆಯ ಮಾಲೀಕ ಉಮೇಶ್ ಕೆ. ಅವರು ಯಶಸ್ವಿ ಉದ್ಯಮಿಯಾಗಲು ಅಗತ್ಯವಿರುವ ದೃಢ ಸಂಕಲ್ಪ ಮತ್ತು ಮನೋಬಲ ಅತೀ ಅಗತ್ಯ. ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಉದ್ಯಮಶೀಲತೆಯತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥರಾದ ಡಾ. ರಾಧಾಕೃಷ್ಣ ಗೌಡ ವಿ. ಅವರು ಸ್ವಾಗತಿಸಿದರು. ಬಿಬಿಎ ವಿದ್ಯಾರ್ಥಿನಿ ಮೋನಿಷಾ ಮತ್ತು ಅವರ ತಂಡ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಆತಿಥೇಯ ಸಂಸ್ಥೆಯ ಡಿಐಎ ನೈನ್ ಪ್ರತಿನಿಧಿ ಅಭಿಷೇಕ್ ಸುವರ್ಣ ವಂದಿಸಿದರು.




























