Home ಜಿಲ್ಲೆ ಮಂಗಳೂರು ಸೌಜನ್ಯ ತಾಯಿಯ ಗುರುತಿನ ಬಗ್ಗೆ ಗ್ರಾಮಸ್ಥನ ಅನುಮಾನ; ವ್ಯಾಪ್ತಿ ಮೀರಿ ತನಿಖೆ ನಡೆಸಲ್ಲ; ಎಸ್‌ಐಟಿ ಸ್ಪಷ್ಟನೆ

ಸೌಜನ್ಯ ತಾಯಿಯ ಗುರುತಿನ ಬಗ್ಗೆ ಗ್ರಾಮಸ್ಥನ ಅನುಮಾನ; ವ್ಯಾಪ್ತಿ ಮೀರಿ ತನಿಖೆ ನಡೆಸಲ್ಲ; ಎಸ್‌ಐಟಿ ಸ್ಪಷ್ಟನೆ

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಕುಸುಮಾವತಿ ಅವರ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಅವರು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು ಸಲ್ಲಿಸಿದ್ದಾರೆ. ಆದರೆ, ಸೌಜನ್ಯ ಅವರ ತಾಯಿ ಕುಸುಮಾವತಿ ಎಂಬ ವಿಚಾರದಲ್ಲಿ ಎಸ್‌ಐಟಿಗೆ ಯಾವುದೇ ಅನುಮಾನವಿಲ್ಲ ಎಂದು ಪೊಲೀಸ್ ಕಮಿಷನರ್ ಹಾಗೂ ಎಸ್‌ಐಟಿ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನ ಎಸ್‌ಐಟಿ ಕಚೇರಿಯಲ್ಲಿ ಈ ಕುರಿತು ಮಾತನಾಡಿದ ಕಿಶೋರ್, ಸೌಜನ್ಯ ಅವರ ತಾಯಿ ಕುಸುಮಾವತಿ ಅವರಿಗೆ ಇಂದಿರಾವತಿ ಎಂಬ ಹೆಸರೂ ಇತ್ತು ಎಂಬ ಮಾಹಿತಿ ಹಾಗೂ ಎರಡೂ ಹೆಸರುಗಳಿಗೆ ಸಂಬಂಧಿಸಿದ ಜನ್ಮದಿನಾಂಕಗಳು ಬೇರೆಬೇರೆಯಾಗಿರುವ ದಾಖಲೆಗಳನ್ನು ಮುಂದಿಟ್ಟುಕೊಂಡು ಅನುಮಾನ ವ್ಯಕ್ತಪಡಿಸಿದ್ದಾರೆ.
ತಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ಎಸ್‌ಐಟಿಗೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ದಾಖಲೆಗಳ ಪ್ರಕಾರ ಕುಸುಮಾವತಿ ಅವರಿಗೆ ೧೪ ವರ್ಷ ವಯಸ್ಸಾಗಿದ್ದಾಗ ಸೌಜನ್ಯ ಜನಿಸಿದ್ದಳು. ೧೪ ವರ್ಷದ ವಯಸ್ಸಿನಲ್ಲಿ ಮಗಳು ಜನಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ಈ ಬಗ್ಗೆ ಅನುಮಾನ ಉಂಟಾಗಿದ್ದು, ಅದನ್ನೇ ಎಸ್‌ಐಟಿ ಮುಂದೆ ಪ್ರಶ್ನಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಅನುಮಾನವು ಸೌಜನ್ಯ ಪ್ರಕರಣದ ತನಿಖೆಗೆ ನೆರವಾಗಬಹುದು ಎಂಬ ಉದ್ದೇಶದಿಂದ ದಾಖಲೆಗಳನ್ನು ಸಲ್ಲಿಸಿದ್ದಾಗಿ ಕಿಶೋರ್ ತಿಳಿಸಿದ್ದಾರೆ.
ಇನ್ನೊಂದೆಡೆ, ಸೌಜನ್ಯ ಅವರ ತಾಯಿ ಕುಸುಮಾವತಿ ಅವರ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಹಾಗೂ ಎಸ್‌ಐಟಿ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಸೌಜನ್ಯ ಅವರ ತಾಯಿ ಕುಸುಮಾವತಿ ಎಂಬ ವಿಚಾರದಲ್ಲಿ ಎಸ್‌ಐಟಿಗೆ ಯಾವುದೇ ಅನುಮಾನಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ತನಿಖೆಯನ್ನು ನಿಗದಿತ ವ್ಯಾಪ್ತಿಯಲ್ಲಿಯೇ ನಡೆಸಲಾಗುವುದು. ಪ್ರಕರಣಕ್ಕೆ ಸಂಬಂಧವಿಲ್ಲದ ವಿಚಾರಗಳ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಹೀಗಾಗಿ, ಸೌಜನ್ಯ ಅವರ ತಾಯಿಯ ಗುರುತಿನ ಬಗ್ಗೆ ಗ್ರಾಮಸ್ಥ ಕಿಶೋರ್ ವ್ಯಕ್ತಪಡಿಸಿರುವ ಅನುಮಾನ ಮತ್ತು ಈ ಕುರಿತು ಎಸ್‌ಐಟಿ ಅಧಿಕಾರಿಯ ಸ್ಪಷ್ಟನೆ ಇದೀಗ ಗಮನ ಸೆಳೆದಿದೆ.