Home ಸಿನೆಮಾ ಸೈಕೋ ಥ್ರಿಲ್ಲರ್ ಅವತಾರದಲ್ಲಿ ಶಾಕ್ ಕೊಡಲು ಜೆಕೆ ರೆಡಿ!

ಸೈಕೋ ಥ್ರಿಲ್ಲರ್ ಅವತಾರದಲ್ಲಿ ಶಾಕ್ ಕೊಡಲು ಜೆಕೆ ರೆಡಿ!

ಈ ವಾರ ತೆರೆಗೆ

ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಸೈಕೋ ಥ್ರಿಲ್ಲರ್ ಹವಾ ಎಬ್ಬಿಸಲು “ಕಾಡ” ಸಿನಿಮಾ ಏಪ್ರಿಲ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಜಯರಾಮ್ ಕಾರ್ತಿಕ್ (ಜೆ.ಕೆ) ಈ ಚಿತ್ರದಲ್ಲಿ ಇದುವರೆಗೆ ಮಾಡದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈಗಾಗಲೇ ಕುತೂಹಲ ಹೆಚ್ಚಿಸಿದೆ.

ಚಿತ್ರವನ್ನು ವಿಶೃತ್ ನಾಯಕ್ ನಿರ್ದೇಶಿಸಿದ್ದು, ಇದು ಅವರ ಮೂರನೇ ಸಿನಿಮಾ. ಸೈಕೋಪಾತ್‌ಗಳ ಮನೋಭಾವದ ಸುತ್ತ ಹೆಣೆಯಲ್ಪಟ್ಟಿರುವ ಈ ಕಥೆ, ವಿಭಿನ್ನ ರೀತಿಯಲ್ಲಿ ರೂಪುಗೊಂಡಿದೆ. ಎರಡು ಬೇರೆ ಕಥೆಗಳಾಗಿ ಆರಂಭವಾಗಿ, ಒಂದೇ ಲೈನ್‌ಗೆ ಸೇರುವ ನ್ಯಾರೇಟಿವ್ ಚಿತ್ರದ ವಿಶೇಷತೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸಾಕಷ್ಟು ಅಧ್ಯಯನದ ನಂತರ ಈ ಕಥೆಯನ್ನು ರೂಪಿಸಿರುವುದಾಗಿ ಅವರು ಹೇಳಿದರು.

ಅಮಿತ್ ಕುಮಾರ್ ಸಕ್ಸೇನ ನಿರ್ಮಿಸಿರುವ ಈ ಚಿತ್ರದಲ್ಲಿ ಜಯರಾಮ್ ಕಾರ್ತಿಕ್ ಅಭಿನಯಕ್ಕೆ ವಿಶೇಷ ಮೆಚ್ಚುಗೆ ವ್ಯಕ್ತವಾಗಿದೆ. ಜೊತೆಗೆ ಕಾವ್ಯ ಶೆಟ್ಟಿ, ಅಚ್ಯುತಕುಮಾರ್, ಉಗ್ರಂ ಮಂಜು, ಶ್ರೀರಾಮ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಯರಾಮ್ ಕಾರ್ತಿಕ್, “ಈ ಸಿನಿಮಾ ನನ್ನಿಗೆ ವಿಭಿನ್ನ ಅನುಭವ. ನಾನು ಮಾಡದ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕಥೆ ಕೇಳಿದಾಗಲೇ ಇಷ್ಟವಾಯಿತು. ಸಕಲೇಶಪುರದಲ್ಲಿ ನಡೆದ ಚಿತ್ರೀಕರಣ ಅದ್ಭುತ ಅನುಭವ ನೀಡಿತು. ಚಿತ್ರವನ್ನು ಪ್ರೇಕ್ಷಕರು ಮೆಚ್ಚುತ್ತಾರೆ ಎಂಬ ಭರವಸೆ ಇದೆ” ಎಂದರು.

ಚಿತ್ರಕ್ಕೆ ಸತೀಶ್ ಬಾಬು ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ವಿಕಾಸ್ ಚಂದ್ರ ಸಂಕಲನ ನೀಡಿದ್ದು, ಸಾಹಸ ನಿರ್ದೇಶನವನ್ನು ನಿರ್ದೇಶಕ ವಿಶೃತ್ ನಾಯಕ್ ಹಾಗೂ ರಮೇಶ್ ನಿರ್ವಹಿಸಿದ್ದಾರೆ.