ಸಂಜೆವಾಣಿ ನ್ಯೂಸ್
ಮೈಸೂರು:ಸೆ.19:- ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸೆ.22 ರಿಂದ 25ರವರೆಗೆ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಆಯುಕ್ತ ಚೇತನ್ ತಿಳಿಸಿದರು.
ಸೆ.22ರಂದು ಸಂಜೆ 4.30ಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಭಾಗವಹಿಸಲಿದ್ದು, ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಎಲ್ಲ ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ, ಡಿ.ದೇವರಾಜ ಅರಸು ಕುಸ್ತಿ ಅಖಾಡ, ಮೈಸೂರು ವಿವಿ ವಿವಿಧ ಕ್ರೀಡಾಂಗಣ ಸೇರಿದಂತೆ 13 ಸ್ಥಳಗಳಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‍ಬಾಲ್, ಜಿಮ್ನಾಸ್ಟಿಕ್ಸ್, ಹಾಕಿ, ಕಬಡ್ಡಿ, ಖೋ-ಖೋ, ಈಜು, ವಾಲಿಬಾಲ್, ಥ್ರೋಬಾಲ್, ಹ್ಯಾಂಡ್‍ಬಾಲ್, ಭಾರ ಎತ್ತುವುದು, ಚೆಸ್, ದೇಹದಾರ್ಢ್ಯ, ಬಾಕ್ಸಿಂಗ್, ಬಾಲ್ ಬ್ಯಾಡ್ಮಿಂಟನ್, ಕುಸ್ತಿ, ಟೆನಿಸ್, ಯೋಗಾ, ನೆಟ್‍ಬಾಲ್, ಆರ್ಚರಿ, ವುಶು, ಟೇಬಲ್ ಟೆನಿಸ್ ಸೇರಿದಂತೆ 26 ಕ್ರೀಡೆಗಳು ನಡೆಯಲಿವೆ ಎಂದರು.
ಈ ಬಾರಿಯೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಮೈಸೂರು, ಬೆಳಗಾವಿ ಎಂಬ 5 ವಿಭಾಗಗಳನ್ನು ರಚಿಸಲಾಗಿದೆ. ವಿಭಾಗ ಮಟ್ಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ತಂಡ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಲಿದೆ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಒಂದು ವಿಭಾಗದಿಂದ 646 ಕ್ರೀಡಾಪಟುಗಳಂತೆ ಐದು ವಿಭಾಗಗಳಿಂದ 3230 ಕ್ರೀಡಾಪಟುಗಳು, 800 ತಾಂತ್ರಿಕ ಸಿಬ್ಬಂದಿ ಭಾಗವಹಿಸಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೂ 54 ವಸತಿ ಗೃಹಗಳಕಲ್ಲಿ ವಸತಿ, ನಂಜರಾಜ ಬಹುದ್ದೂರ್ ಛತ್ರದಲ್ಲಿ ಊಟೋಪಹಾರ, ಸಾರಿಗೆ, ವೈದ್ಯಕೀಯ ವ್ಯವಸ್ಥೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ನಗದು ಬಹುಮಾನ: ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗುವ ಕ್ರಿಡಾಪಟುಗಳಿಗೆ 2000ಕ್ಕೂ ಹೆಚ್ಚು ಪದಕ, ಪಾರಿತೋಷಕ, ಪ್ರಮಾಣ ಪತ್ರ ನೀಡಲಾಗುವುದು ಜತೆಗೆ ವೈಯಕ್ತಿಕ ವಿಭಾಗದ ವಿಜೇತರಿಗೆ ಪ್ರಥಮ ಬಹುಮಾನ 8 ಸಾವಿರ, ದ್ವಿತೀಯ 5 ಸಾವಿರ, ತೃತೀಯ ಬಹುಮಾನವಾಗಿ 2500 ನೀಡಲಾಗುವುದು. ಗುಂಪು ವಿಭಾಗದಲ್ಲಿ 7 ಜನರನ್ನೊಳಗೊಂಡ ತಂಡಕ್ಕೆ 4 ಸಾವಿರ (ಪ್ರ), 3 ಸಾವಿರ (ದ್ವಿ), ಹಾಗೂ 2 ಸಾವಿರ (ತೃ), ಬಹುಮಾನ ನಿಗದಿ ಮಾಡಲಾಗಿದೆ. 8ಕ್ಕಿಂತ ಹೆಚ್ಚು ಆಟಗಾರನ್ನೊಳಗೊಂಡ ತಂಡಕ್ಕೆ 3 ಸಾವಿರ (ಪ್ರ), 2 ಸಾವಿರ (ದ್ವಿ), ಹಾಗೂ 1 ಸಾವಿರ (ತೃ) ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸೆ.24ರಂದು ಬೆಟ್ಟ ಹತ್ತುವ ಸ್ಪರ್ಧೆ ಆಯೋಜಿಸಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ, 7 ಸಾವಿರ, 5 ಸಾವಿರ ನೀಡಲಾಗುವುದು. ಇದರ ಜತೆಗೆ ಸ್ಥಳೀಯವಾಗಿ ಅಂಧರ ಚೆಸ್, ಸೈಕಲ್ ಪೋಲೋ, ಕರಾಟೆ, ಬಾಡಿ ಬಿಲ್ಡಿಂಗ್ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣದಲ್ಲಿ ಜಲಸಾಹಸ ಕ್ರೀಡೆ ಆಯೋಜಿಸಲಾಗಿದೆ. 10ಕೆ ಮ್ಯಾರಥಾನ್ ಸಹ ಆಯೋಜಿಸಲಾಗಿದ್ದು, ಇನ್ನೂ ದಿನಾಂಕ ನಿಗದಿಯಾಗಿಲ್ಲ ಎಂದು ತಿಳಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ದಸರಾ ಕ್ರೀಡಾ ಉಪ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ನಾಯಕ್, ಎ.ಜೆ.ಜಾನ್ಸನ್ ಇತರರಿದ್ದರು.



























