ಸಂಜೆವಾಣಿ ನ್ಯೂಸ್
ಮೈಸೂರು: ಆ.29:- ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಷಡ್ಯಂತ್ರ ವಿರೋಧಿಸಿ ಸೆ.1ರಂದು ಬಿಜೆಪಿಯಿಂದ ಧರ್ಮಸ್ಥಳ ಚಲೋ ಯಾತ್ರೆ ನಡೆಸಲಾಗುತ್ತಿದೆ ಎಂದು ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ ತಿಳಿಸಿದರು.
ಗುರುವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ತರಲು ಷಡ್ಯಂತ್ರ ನಡೆಯುತ್ತಿದೆ. ಇದನ್ನು ಖಂಡಿಸಿ ಧರ್ಮಸ್ಥಳ ನಡೆಸಲಾಗುತ್ತಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಭಕ್ತರು ಸೇರುವ ಸಾಧ್ಯತೆ ಇದೆ. ಜತೆಗೆ ಧರ್ಮಸ್ಥಳದಲ್ಲಿ ಧರ್ಮ ಸಭೆ ಹೆಸರಿನಲ್ಲಿ ಬಿಜೆಪಿಯಿಂದ ಬೃಹತ್ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಬಿಜೆಪಿಯ ಎಲ್ಲಾ ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ. ಮೈಸೂರಿನ ಪ್ರತಿ ವಿಧಾನಸಭೆ ಕ್ಷೇತ್ರದಿಂದ ಒಂದು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದರು.
31ರಂದು ಮೈಸೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಹೊರಡಲಿದ್ದು, ಮೈಸೂರು ನಗರದಿಂದ 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿ, ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದ್ದೋ ಅಲ್ಲವೋ ಎಂದು ನಾಳೆ ಸಂಜೆಯೊಳಗೆ ಸಿದ್ದರಾಮಯ್ಯ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಸಿದ್ದರಾಮಯ್ಯ ಸುತ್ತಮುತ್ತ ಇರುವ ಡೋಂಗಿಗಳನ್ನು ಮೆಚ್ಚಿಸುವ ಸಲುವಾಗಿ ದಸರಾ ಉದ್ಘಾಟನೆ ಮಾಡಲು ಬಾನುಮುಷ್ತಾಕ್ ರನ್ನು ಆಯ್ಕೆ ಮಾಡಿದ್ದೀರಾ? ದಸರಾ ಧಾರ್ಮಿಕ ಪರಂಪರೆಗೆ ಅನುಸಾರವಾಗಿ ನಡೆಯುತ್ತದೆ. ನಮಗೆ ಬಾನು ಮುಷ್ತಾಕ್ ಮೇಲೆ ದ್ವೇಷವಿಲ್ಲ. ಆದರೆ, ಅವರು ಅರಿಶಿನ ಕುಂಕುಮದ ಬಣ್ಣವನ್ನು ಟೀಕೆ ಮಾಡಿದ್ದಾರೆ. ಅಲ್ಲದೇ ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಈ ವಿಚಾರದಲ್ಲಿ ಅಗತ್ಯ ಬಿದ್ದರೆ ಹೋರಾಟ, ಬಲಿದಾನಕ್ಕೂ ಸಿದ್ದರಿದ್ದೇವೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅನಿಲ್ ಥಾಮಸ್, ನಗರ ಕಾರ್ಯದರ್ಶಿ ಗಿರಿಧರ್, ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಶ್, ಮಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಹಾಗೂ ಇನ್ನಿತರರು ಇದ್ದರು.



























