ಪುತ್ತೂರು; ಪುತ್ತೂರು ಶಾರದಾ ಭಜನಾ ಮಂದಿರ ವತಿಯಿಂದ ನವರಾತ್ರಿ ಉತ್ಸವದ ಪ್ರಯುಕ್ತ ೯೧ ವರ್ಷದ ಶ್ರೀ ಶಾರದೋತ್ಸವ ಮತ್ತು ಚಂಡಿಕಾಹೋಮ ಸೆ.೨೨ರಿಂದ ಆರಂಭವಾಗಲಿದ್ದು, ಅ.೨ ರಂದು ಸಂಜೆ ೫ ಗಂಟೆಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಹೇಳಿದರು.
ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ೯೧ ವರ್ಷಗಳ ಹಿಂದೆ ಶಾರದಾ ಭಜನಾ ಮಂದಿರ ಮೂಲಕ ಆರಂಭಗೊಂಡ ಈ ಶಾರದೋತ್ಸವಕ್ಕೆ ಕಳೆದ ೩ ವರ್ಷಗಳಿಂದ ಹೆಚ್ಚಿನ ವಿಜೃಂಭಣೆ ಹಾಗೂ ಅದ್ದೂರಿತನ ನೀಡಲಾಗಿದೆ. ಸೆ.೨೨ರಂದು ನವರಾತ್ರಿ ಪೂಜೆ ಆರಂಭವಾಗಲಿದೆ. ಸಂಜೆ ೭ ಗಂಟೆಗೆ ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸೆ.೨೯ರಂದು ಬೆಳಿಗ್ಗೆ ೯.೩೦ಕ್ಕೆ ಶಾರದಾ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಶಾರದೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಸಾಮೂಹಿಕ ಚಂಡಿಕಾಹೋಮ
ಸೆ.೩೦ರಂದು ಬೆಳಿಗ್ಗೆ ೮ ಗಂಟೆಯಿಂದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಲೋಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾ ಹೋಮ ನಡೆಯಲಿದೆ. ಮಧ್ಯಾಹ್ನ ೧೨ಕ್ಕೆ ಪೂರ್ಣಾಹುತಿ ಬಳಿಕ ಪ್ರಸಾದ ವಿರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ತಿಳಿಸಿದರು.
ಅ.೨ರಂದು ಬೆಳಿಗ್ಗೆ ೯ ಗಂಟೆಯಿಂದ ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ ೫ಕ್ಕೆ ಶೋಭಾಯಾತ್ರೆ ಆರಂಭವಾಗಲಿದ್ದು, ಶಾಸಕ ಅಶೋಕ್ ರೈ ಅವರಿಂದ ಶಾರದಾ ಮಾತೆಗೆ ಪುಷ್ಪಾರ್ಚನೆ ನಡೆಯಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. ಚೆಂಡೆಮೇಳ, ವಾದ್ಯಮೇಳ, ಕುಣಿತಭಜನೆ ಜತೆಗೆ ಕೇರಳ, ಆಂದ್ರಪ್ರದೇಶ,ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಸಿದ್ಧ ಸಾಂಸ್ಕೃತಿಕ ಕಲಾ ತಂಡಗಳ ವಿಶೇಷ ಆಕರ್ಷಣೆಯೊಂದಿಗೆ ಶೋಭಾಯಾತ್ರೆ ನಡೆಯಲಿದೆ. ಪುತ್ತೂರಿನ ಬೊಳುವಾರುನಿಂದ ಆರಂಭಗೊಳ್ಳುವ ಈ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ಮುಖ್ಯರಸ್ತೆ ಮೂಲಕ ದರ್ಭೆ ತನಕ ನಡೆಯಲಿದೆ. ಬಳಿಕ ವಾಪಾಸು ಮಹಾಲಿಂಗೇಶ್ವರ ದೇವಳಕ್ಕೆ ಬಂದು ಅಲ್ಲಿ ವಿಗ್ರಹದ ಜಲಸ್ಥಂಭನ ನಡೆಯಲಿದೆ. ಶೋಭಾಯಾತ್ರೆ ಸಂದರ್ಭ ಬೊಳುವಾರು ವೃತ್ತ, ಇನ್‌ಲ್ಯಾಂಡ್ ಮಯೂರ, ಶ್ರೀಧರ್ ಭಟ್ ಬಿಲ್ಡಿಂಗ್, ಬಸ್ ನಿಲ್ದಾಣ, ಹೋಟೆಲ್ ಸುಜಾತ ಹಾಗೂ ದರ್ಭೆವೃತ್ತಗಳಲ್ಲಿ ಕಲಾ ತಂಡಗಳ ಪ್ರಧರ್ಶನ ನಡೆಯಲಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ
ಸೆ.೨೯ರಂದು ಸಂಜೆ ೪ರಿಂದ ಲಲಿತಾ ಸಹಸ್ರನಾಮ ೫.೩೦ರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಲಿದೆ. ಸೆ.೩೦ರಂದು ಸಂಜೆ ೬ರಿಂದ ಭಕ್ತಿ ಭಾವಗೀತಾ ಸಂಗಮ ನಡೆಯಲಿದೆ. ಅ.೧ರಂದು ಸಂಜೆ ೫.೩೦ಕ್ಕೆ ಶ್ರೀದೇವಿ ಚರಿತಾಮೃತ ಯಕ್ಷಗಾನ ನಡೆಯಲಿದೆ. ಪ್ರತೀ ದಿನ ಸಂಜೆ ೪ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ ಹಾಗೂ ೮.೩೦ಕ್ಕೆ ಮಹಾಪೂಜೆ ನಡೆಯಲಿದೆ ಎಂದು ಅವರು ತಿಳಿಸಿದರು.
ಗೋಷ್ಟಿಯಲ್ಲಿ ಶಾರದಾ ಭಜನಾ ಮಂದಿರದ ಪ್ರ.ಕಾರ್ಯದರ್ಶಿ ಜಯಂತ ಉರ್ಲಾಂಡಿ, ಕೋಶಾಧಿಕಾರಿ ನವೀನ್ ಕುಲಾಲ್, ಮಾತೃಮಂಡಳಿಯ ಸದಸ್ಯೆ ಚಿತ್ರಾ ಪ್ರಸಾದ್ ರೈ ಮತ್ತು ನವನೀತರಾಜ್ ಉಪಸ್ಥಿತರಿದ್ದರು.




























