ಸೆ.೧೭ ರಿಂದ ಜಿಲ್ಲೆಯಾದ್ಯಂತ ಮಹಿಳೆಯರ ಆರೋಗ್ಯ ತಪಾಸಣೆಗೆ ಚಾಲನೆ

ಮಂಗಳೂರು-ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆರ್.ಎ.ಪಿ.ಸಿ.ಸಿ ಸಭಾಂಗಣದಲ್ಲಿ ಆರೋಗ್ಯವಂತ ಮಹಿಳೆ, ಸಶಕ್ತ ಕುಟುಂಬ ಅಭಿಯಾನ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಆರ್ ತಿಮ್ಮಯ್ಯ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ಕಾರ್ಯಕ್ರಮವು ಸೆಪ್ಟೆಂಬರ್ ೧೭ ರಿಂದ ಮೊದಲ್ಗೊಂಡು ಅಕ್ಟೋಬರ್ ೨ ರವರೆಗೆ ಜಿಲ್ಲೆಯಾದ್ಯಂತ ಬೇರೆ ಬೇರೆ ಆರೋಗ್ಯ ಕಾರ್ಯಕ್ರಮ ತಪಾಸಣಾ ಶಿಬಿರಗಳೊಂದಿಗೆ ನಡೆಯಲಿದೆ. ಈ ಅಭಿಯಾನದ ಮುಖ್ಯ ಉದ್ದೇಶಗಳಲ್ಲಿ ಎಲ್ಲಾ ಮಹಿಳೆಯರಿಗಾಗಿ ವೈದ್ಯಕೀಯ ಪರೀಕ್ಷೆ ಮತ್ತು ಆರೋಗ್ಯ ಸೇವೆಗಳನ್ನು ನೀಡುವ್ಯದಾಗಿದೆ ಎಂದರು.
ಕ್ಯಾನ್ಸರ್ ಬಾಯಿ, ಸ್ತನ, ಗರ್ಭಾಶಯದ ಬಾಯಿ ಪರೀಕ್ಷೆ/ ಗರ್ಭಿಣಿ ಮಹಿಳೆಯರಿಗೆ ಪ್ರಸವ ಪೂರ್ವ ಹಾಗೂ ನಂತರದ ಆರೈಕೆಗಳು, ರಕ್ತಹೀನತೆ ಮಧುಮೇಹ, ರಕ್ತದೊತ್ತಡ, ಕ್ಷಯ ರೋಗ ತಪಾಸಣೆ ಇತ್ಯಾದಿಗಳನ್ನು ಒಳಗೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸೇವಾ ಸೌಲಭ್ಯವನ್ನು ಪಡೆಯಲು ವಿಶೇಷ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.
ಇದೇ ಅಭಿಯಾನದಡಿಯಲ್ಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಂಗಾಂಗ ದಾನದ ಪ್ರಾಮುಖ್ಯತೆ ಸಾಂಕ್ರಾಮಿಕ ಕಾಯಿಲೆ, ಅಸಾಂಕ್ರಾಮಿಕ ಕಾಯಿಲೆಗಳ ಬಗ್ಗೆ ಜಾಗೃತಿ ಅರಿವನ್ನು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್ ಎ ಮಾತನಾಡಿ, ಕಾರ್ಯ ಕ್ಷೇತ್ರದಲ್ಲಿ ದಿನನಿತ್ಯ ಕರ್ತವ್ಯದ ಅವಧಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಒತ್ತಡ/ ಆರೋಗ್ಯ ಸಮಸ್ಯೆಗಳಿಂದ ಮನಸ್ಸಿನಶಾಂತಿಯನ್ನು ಕಳೆದುಕೊಳ್ಳುವುದು ಸರ್ವೆ ಸಾಮಾನ್ಯ. ಮಾನಸಿಕವಾಗಿ ಅಸ್ವಸ್ಥತೆಗೊಳಗಾಗುವ ಸಾಧ್ಯತೆಗಳಿರುವುದರಿಂದ ಮಕ್ಕಳ ಜೊತೆ ಕೆಲಸ ಮಾಡುವ ಕಾರಣ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಸುದರ್ಶನ್ ಸ್ವಾಗತಿಸಿ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಅಗತ್ಯತೆಗಳ ಬಗ್ಗೆ ಹಾಗೂ ಮಾನಸಿಕ ಆರೋಗ್ಯ ಕಾಯ್ದೆಯ ಕುರಿತು ಇವರು ಪ್ರ್ರಾಸ್ತಾವಿಕವಾಗಿ ಮಾಹಿತಿಯನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದು ಮಾತನಾಡಿದರು.
ಅಸಾಂಕ್ರಾಮಿಕ ರೋಗಗಳ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ೧೦೦ ಮಂದಿ ಫಲಾನುಭವಿಗಳು ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವೆನ್ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ಚಂದ್ರ, ಜಿಲ್ಲಾ ರೋಗವಾಹ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜೆಸಿಂತಾ ಡಿ’ಸೋಜಾ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಪ್ರಭು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳೆಪಾಡಿ ಭಾಗವಹಿಸಿದರು.