
ಉಡುಪಿ-ಉಡುಪಿ ಜಿಲ್ಲೆಯ ಮೊಬೈಲ್ ಅಂಗಡಿಗಳಿಗೆ ಅಪರಿಚಿತ ವ್ಯಕ್ತಿಗಳು ಮಾರಾಟಕ್ಕೆ ತಂದ ಸೂಕ್ತ ದಾಖಲೆಗಳಿಲ್ಲದ ಮೊಬೈಲ್ ಫೋನ್‌ಗಳನ್ನು ಉಡುಪಿ ಜಿಲ್ಲಾ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಪದಾಧಿಕಾರಿಗಳು ಬುಧವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರಿಗೆ ಹಸ್ತಾಂತರಿಸಿದರು.
ಮೊಬೈಲ್ ಅಂಗಡಿಗಳಿಗೆ ಅಪರಿಚಿತರು ಮೊಬೈಲ್ ಮಾರಾಟ ಮಾಡಲು ಬಂದ ಸಂದರ್ಭದಲ್ಲಿ ಅಂಗಡಿಯ ಮಾಲಕರು ಸಂಶಯಗೊಂಡು, ಮೊಬೈಲ್‌ಗಳನ್ನು ಸಂಚಾರ್ ಸಾಥಿ ಆಪ್ ಮೂಲಕ ಪರಿಶೀಲಿಸಿದ್ದರು. ಆಗ ಅವುಗಳು ಬ್ಲಾಕ್ ಲಿಸ್ಟ್‌ನಲ್ಲಿ ಇರುವುದು ಕಂಡುಬಂದಿತು. ಈ ಸಂಬಂಧ ಮೊಬೈಲ್‌ಗಳ ಸೂಕ್ತ ದಾಖಲೆಗಳನ್ನು ಕೇಳಿದಾಗ ಯಾವುದೇ ದಾಖಲೆಗಳನ್ನು ನೀಡದೇ ಇರುವುದರಿಂದ ಹೆಚ್ಚಿನ ಅನುಮಾನ ವ್ಯಕ್ತವಾಯಿತು.
ಅಂತಹ ಒಟ್ಟು ಏಳು ಮೊಬೈಲ್‌ಗಳನ್ನು ಅಸೋಸಿಯೇಷನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ಹಾಗೂ ಸದಸ್ಯರಾದ ರಂಜಿತ್ ಶೆಟ್ಟಿ, ಸಂದೇಶ್, ಸುಧರ್ಶನ್, ಗಣೇಶ್ ಹಾಗೂ ಅಭಿಷೇಕ್ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕರವರಿಗೆ ಒಪ್ಪಿಸಿದರು.
ಈ ಮೊಬೈಲ್‌ಗಳ ಮೂಲ ವಾರಸುದಾರರನ್ನು ಅಇIಖ ಪೋರ್ಟಲ್ ಮೂಲಕ ಪತ್ತೆಹಚ್ಚಿ, ಕಾನೂನು ಕ್ರಮದಂತೆ ಮೂಲ ಮಾಲೀಕರಿಗೆ ಹಸ್ತಾಂತರಿಸಲಾಗುವುದು ಎಂದು ಎಸ್‌ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.
“ಅಪರಿಚಿತ ವ್ಯಕ್ತಿಗಳು ಮೊಬೈಲ್ ಮಾರಾಟಕ್ಕೆ ಬಂದಲ್ಲಿ ಮೊದಲು ಸಂಚಾರ್ ಸಾಥಿ ಆಪ್‌ನಲ್ಲಿ ಪರಿಶೀಲನೆ ಮಾಡಬೇಕು. ಮೊಬೈಲ್ ಪರಿಶೀಲನೆಗಾಗಿ ಅಂಗಡಿ ಮಾಲೀಕರು ತಮ್ಮ ಸ್ವಂತ ಸಿಮ್ ಕಾರ್ಡ್ ಬಳಸದೇ, ಮೊಬೈಲ್ ನೀಡಿದ ಗ್ರಾಹಕರ ಸಿಮ್ ಕಾರ್ಡ್‌ನನ್ನೇ ಬಳಸಬೇಕು. ಸೂಕ್ತ ದಾಖಲೆಗಳಿಲ್ಲದ ಮೊಬೈಲ್‌ಗಳನ್ನು ಖರೀದಿಸುವುದು ಅಥವಾ ಸ್ವೀಕರಿಸುವುದನ್ನು ತಪ್ಪಿಸಬೇಕು. ಯಾವುದೇ ಅನುಮಾನಾಸ್ಪದ ಮಾಹಿತಿ ಅಥವಾ ಈ ಮೇಲ್ಕಂಡ ರೀತಿಯಲ್ಲಿ ಮೊಬೈಲ್ ಮಾರಾಟಕ್ಕೆ ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು”
? ಹರಿರಾಂ ಶಂಕರ್, ಎಸ್‌ಪಿ ಉಡುಪಿ

























