
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಫೆ. 22 :- ಯೋಗಾಭ್ಯಾಸ ಮತ್ತು ಪ್ರಕೃತಿ ಚಿಕಿತ್ಸೆಯಿಂದ ಸುಸ್ಥಿರ ಆರೋಗ್ಯ ಸಾಧ್ಯ. ಪ್ರತಿಯೊಬ್ಬರೂ ಈ ಸಹಜ- ಸರಳ ಚಿಕಿತ್ಸಾ ವಿಧಾನವನ್ನು ಜೀವನಕ್ರಮವಾಗಿ ರೂಢಿಸಿಕೊಂಡಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಜಿಲ್ಲಾಪಂಚಾಯ್ತಿ ಮಾಜಿ ಅಧ್ಯಕ್ಷ ಮತ್ತು ಜ್ಞಾನಮಂಟಪ ಎಜ್ಯುಕೇಶನಲ್ ಟ್ರಸ್ಟ್ ಸಂಸ್ಥಾಪಕ ಉಮೇಶ್ ಅಭಿಪ್ರಾಯಪಟ್ಟರು.
ಅವರು ನಿನ್ನೆ ತಾಲೂಕಿನ ಗುಂಡಿನಹೊಳೆ ಸಮೀಪದ ಜೆಎನ್ಎಂ ಮೌಂಟೇನ್ವ್ಯೂ ಶಾಲೆ ಆವರಣದಲ್ಲಿ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ಸೃಷ್ಟಿ ಯೋಗ ಸೇವಾ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಾ ಯೋಗ ಸಾಧಕರಿಗೆ ರೋಗವಿಲ್ಲ, ಪ್ರಕೃತಿ ಚಿಕಿತ್ಸೆ ಅತ್ಯುತ್ತಮ ಪದ್ಧತಿ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಆದರೂ ಅಲೋಪಥಿಗೆ ನೀಡುವ ಮಹತ್ವವನ್ನು ಸಮಾಜ ಇದಕ್ಕೆ ನೀಡದಿರುವುದು ವಿಷಾದನೀಯ. ಯೋಗ, ಧ್ಯಾನ, ಪ್ರಾಣಾಯಾಮಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮ ಮಾರ್ಗ. ನಮ್ಮ ಸನಾತನ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಈ ಚಿಕಿತ್ಸಾ ವಿಧಾನದ ಬಗ್ಗೆ ಅರಿವು ಮೂಡಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.ನಮ್ಮ ಹಿರಿಯರು ಹೇಳಿಕೊಟ್ಟ ಜೀವನಪದ್ಧತಿಗಳನ್ನು ಅನುಸರಿಸುವುದು, ಸಿರಿಧಾನ್ಯಗಳ ಬಳಿಕೆ ಮತ್ತು ದುಶ್ಚಟಗಳಿಂದ ದೂರ ಇರುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜನನಿ ಸಂಸ್ಥೆಯ ನಿರ್ದೇಶಕ ಹಾಗೂ ಮುಖ್ಯವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮಾತನಾಡಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ನಮ್ಮ ಜೀವನ ಕ್ರಮವಾಗಬೇಕು. ಉತ್ತಮ ಆರೋಗ್ಯಕ್ಕೆ ಸಮತೋಲಿತ ಆಹಾರ ಅಗತ್ಯ. ಆಹಾರವೇ ದಿವ್ಯೌಷಧ. ಸರಿಯಾದ ಆಹಾರ ಕ್ರಮ ಮತ್ತು ಜೀವನಶೈಲಿಯೇ ಆರೋಗ್ಯದ ಗುಟ್ಟು ಎಂದು ವಿಶ್ಲೇಷಿಸಿದರು.ಆಹಾರ ಕ್ರಮದಲ್ಲಿ ಹೆಚ್ಚು ಹಣ್ಣು- ತರಕಾರಿ, ಬೇಳೆಕಾಳುಗಳು, ಮೊಳಕೆಕಾಳುಗಳನ್ನು ಅಳವಡಿಸಿಕೊಳ್ಳಿ. ಯೋಗಾಭ್ಯಾಸ ಮತ್ತು ಶಿಸ್ತಿನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಪಡೆಯೋಣ ಎಂದರು.
ಜನನಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ಉದಯಶಂಕರ ಭಟ್ ಮಾತನಾಡಿ, ಪಾಶ್ಚಾತ್ಯ ಜೀವನಶೈಲಿಯಿಂದಾಗಿ ಇಂದು ವಿಶೇಷವಾಗಿ ಯುವಜನಾಂಗವನ್ನು ಜೀವನಶೈಲಿ ರೋಗಗಳು ಬಾಧಿಸುತ್ತಿವೆ. ಔಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರ್ಪಡಿಸಿಕೊಳ್ಳುವ ಮೂಲಕ ಮರೆತ ಅಂಶಗಳನ್ನು ನಮಗೆ ಪ್ರಕೃತಿ ಚಿಕಿತ್ಸಾ ಪದ್ಧತಿ ನೆನಪಿಸುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ” ಎಂದು ಹೇಳಿದರು.ಜನನಿ ಆಸ್ಪತ್ರೆ ಕಲ್ಯಾಣ ಕರ್ನಾಟಕಕ್ಕೆ ದೊಡ್ಡ ಕೊಡುಗೆಯಾಗಿದ್ದು, ಮನೆಬಾಗಿಲಲ್ಲೇ ಇಂಥ ಸೌಲಭ್ಯವನ್ನು ಅಭಿವೃದ್ಧಿಪಡಿಸುವುದು ಸಮಾಜಕ್ಕೆ ವರದಾನ. ಜನಸಾಮಾನ್ಯರು ಇದರ ಸೌಲಭ್ಯ ಪಡೆದು ಆರೋಗ್ಯವಂತ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ಸೃಷ್ಟಿ ಯೋಗ ಸೇವಾ ಚಾರಿಟೇಬಲ್ ಟ್ರಸ್ಟನ ಸುಮಲತಾ, ಗಣ್ಯರಾದ ಚಂದ್ರಪ್ಪ, ಶಾಲೆಯ ಸಂಯೋಜಕ ಪ್ರಶಾಂತ್ ಉಪಸ್ಥಿತರಿದ್ದರು. ಪುಟಾಣಿ ಸಹನಾ ಯೋಗನೃತ್ಯ ಪ್ರದರ್ಶಿಸಿದರು. ಶಿಕ್ಷಕಿ ಮಹೇಂದ್ರಮ್ಮ ಕಾರ್ಯಕ್ರಮ ನಿರೂಪಿಸಿದರು. 200ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.

























