
ಸುಳ್ಯ:ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಗಾಳಿಮಳೆಯಾಗಿದ್ದು, ತೆಂಗಿನ ಮರ ಬಿದ್ದು ಎರಡು ಮನೆ ಸೇರಿದಂತೆ ಮದರಸ ಕಟ್ಟಡಕ್ಕೆ ಹಾನಿಯಾಗಿದೆ
ಸುಳ್ಯ ನಗರ ಸೇರಿದಂತೆ ಸಂಪಾಜೆ, ಕಲ್ಲುಗುಂಡಿ, ಅರಂತೋಡು, ಬೆಳ್ಳಾರೆ, ಮಂಡೆಕೋಲು, ಅಜ್ಜಾವರ, ಎಲಿಮಲೆ, ದೊಡ್ಡತೋಟ, ಸೋಣಂಗೇರಿ ಭಾಗದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ಭಾಗದಲ್ಲಿ ಮಳೆಗಾಲವನ್ನು ನೆನಪಿಸುವಂತೆ ಗುಡುಗು,ಸಿಡಿಲು ಸಮೇತ ಭಾರೀ ಮಳೆಯಾಗಿದ್ದು ಅರ್ಧ ಗಂಟೆಗೂ ಹೆಚ್ಚು ಸಮಯ ಉತ್ತಮ ಮಳೆಯಾಗಿದೆ. ನಗರದಲ್ಲಿ ಸುಮಾರು ೨೦ ನಿಮಿಷಕ್ಕೂ ಹೆಚ್ಚು ಕಾಲ ಸಾಧಾರಣ ಮಳೆಯಾಗಿದೆ.
ಬುಧವಾರ ಸಂಜೆ ಬೀಸಿದ ಬಾರಿ ಗಾಳಿಗೆ ತೆಂಗಿನ ಮರ ಮುರಿದು ಬಿದ್ದು ಮನೆಗೆ ಹಾನಿ ಉಂಟಾದ ಘಟನೆ ನಗರದ ಗುರುಂಪು ಎಂಬಲ್ಲಿ ನಡೆದಿದೆ. ಗುರುಂಪು ನಿವಾಸಿ ಮುನೀರ್ ಎಂಬುವವರ ಮನೆಗೆ ತೆಂಗಿನ ಮರ ಬಿದ್ದ ಘಟನೆಯ ವೇಳೆ ಸ್ಥಳದಲ್ಲಿ ಯಾರು ಇಲ್ಲದ ಕಾರಣ ಯಾವುದೇ ಜೀವಪಾಯ ಸಂಭವಿಸದೆ ದೊಡ್ಡ ಪ್ರಮಾಣದ ಅನಾಹುತ ತಪ್ಪಿದೆ.
ಅಲ್ಲದೇ ಸಂಪಾಜೆ ವ್ಯಾಪ್ತಿಯಲ್ಲಿ ಕೂಡ ಧಾರಾಕಾರ ಮಳೆಯಾಗಿದ್ದು ಪೆಲ್ತಡ್ಕದ ಚಂದ್ರಾವತಿ, ಹಾಗೂ ಗೂನಡ್ಕ ನಿವಾಸಿ ರಾಜ ಎಂಬವರ ಮನೆಗೆ ತೆಂಗಿನ ಮರ ಬಿದ್ದು ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲಿಮಲೆಯಲ್ಲಿ ಬೀಸಿದ ಗಾಳಿಮಳೆಗೆ ಎಲಿಮಲೆ ನೂರುಲ್ ಹುದಾ ಮದ್ರಸ ಕಟ್ಟಡದ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದು ಹಾನಿಯಾಗಿದೆ.






























