
ಸುಳ್ಯ:ಸುಳ್ಯ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಡದಿಂದ ಅನುಮೋದನೆಗೊಂಡು ಕೊಡಲ್ಪಡುವ ಏಕ ನಿವೇಶನ ನಕ್ಷೆ ಹಾಗೂ ಭೂ ಅಭಿವೃದ್ಧಿಗೆ ಶುಲ್ಕ ಸಂಗ್ರಹ ಮಾಡುವಂತೆ ಸುಳ್ಯ ಪಟ್ಟಣ ಪಂಚಾಯಿತಿ ೨೦೨೬-೨೭ ರ ಮುಂಗಡ ಆಯವ್ಯಯ ತಯಾರಿಸುವ ಕುರಿತ ಸಮಾಲೋಚನ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರ ಪಂಚಾಯಿತಿ ಆಡಳಿತಾಧಿಕಾರಿ ಮಂಜುಳಾ. ಎಂ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಆಯವ್ಯಯ ಪೂರ್ವಬಾವಿ ಸಭೆಯಲ್ಲಿ ನಿಕಟಪೋರ್ವ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಪಟ್ಟಣ ಪಂಚಾಯಿತಿ ಕಂದಾಯ , ತೆರಿಗೆ ,ಸಂಗ್ರಹಿಸಿ ಸ್ವಂತ ಅನುದಾನದ ಮೂಲಕ ಪಟ್ಟಣದ ಅಭಿವೃದ್ಧಿ ಜೊತೆಗೆ ಅಕ್ರಮ ಕಟ್ಟಡಗಳ ತಡೆಯುವಿಕೆಯು ಮುಖ್ಯವಾಗಿದೆ. ಇದೀಗ ಸುಳ್ಯ ನಗರ ಬೆಳೆಯುತ್ತಿದ್ದು ಮಾಸ್ಟರ್ ಪ್ಲಾನ್ ತಯಾರಿಕೆ ಮುಖ್ಯವಾಗಿದೆ. ಈ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಕೆಲ ಕೆಲಸಗಳಿಗಿಂತ ತುರ್ತು ಅಗತ್ಯವಿರುವ ಇತರೆ ಕೆಲಸಗಳನ್ನು ಬಜೆಟ್‌ನಲ್ಲಿ ಸೇರ್ಪಡೆಗೊಳಿಸಿ ಘೋಷಣೆ ಹಾಗೂ ಮುಂದುವರಿದ ಕಾಮಗಾರಿಗಳಾಗಿ ಸೇರ್ಪಡೆ ಗೊಳಿಸಬೇಕು. ಜೊತೆಗೆ ಜನವರಿ ಅಂತ್ಯದವರೆಗಿನ ತೆರಿಗೆ ಸಂಗ್ರಹದ ಆಧಾರದಲ್ಲಿ ಆಯವ್ಯಯ ಮಂಡನೆಯಾಗಲಿದ್ದು ಜೊತೆಗೆ ಫೆ.೧೫ ರ ಒಳಗೆ ಸಂಪೂರ್ಣ ತೆರಿಗೆ ಸಂಗ್ರಹವಾಗಬೇಕು. ತೆರಿಗೆ ಕಟ್ಟದವರಿಗೆ ನೋಟಿಸ್ ಜಾರಿ ಮಾಡುವ ಮೂಲಕ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಮಾಜಿ ಸದಸ್ಯರುಗಳು ಹಿಂದಿನ ಯೋಜನೆಗಳನ್ನು ಪೋರ್ಣಗೊಳಿಸಲು ಬಜೆಟ್ ನಲ್ಲಿ ಅನುದಾನ ಮೀಸಲಿರಿಸಲು ಆಗ್ರಹಿಸಿದರೆ ಇತ್ತ ಶಾಸಕರು ಮತ್ತು ಸಂಸದರ ಅನುದಾನವನ್ನು ಕೇಳಿಕೊಂಡು ಬಜೆಟ್ ನಲ್ಲಿ ಸೇರ್ಪಡೆಗೊಳಿಸಲು ಸಲಹೆ ಸೂಚನೆಗಳನ್ನು ನೀಡಿದರು.
ರಾಜ್ಯದ ಯಾವುದೇ ನಗರ ಪಂಚಾಯಿತಿಗಳಲ್ಲಿ ಭೂ ಅಭಿವೃದ್ಧಿ ಮತ್ತು ಏಕ ನೀವೇಶನದ ಸಂಧರ್ಭದಲ್ಲಿ ಉಚಿತವಾಗಿ ಪರವಾನಿಗೆ ನೀಡುವುದಿಲ್ಲ ಜೊತೆಗೆ ಇಲ್ಲಿ ಉಚಿತವಾಗಿ ನೀಡುವುತ್ತಿರುವುದು ಸರಿಯಲ್ಲ ಹಾಗೂ ಸರಕಾರದ ನಿಯಮಾನುಸಾರ ಪ್ರಕಟಣೆಯ ಮೂಲಕ ತಿಳಿಯ ಪಡಿಸಿ ಮುಂದೆ ಅಭಿವೃದ್ಧಿ ಶುಲ್ಕವನ್ನು ವಿಧಿಸಿ ಪರವಾನಿಗೆ ನೀಡಬೇಕು ಎಂದು ಹೆಳೀದ ಆಡಳಿತಾಧಿಕಾರಿ ಮಂಜುಳಾ ಅವರು ರಾಜ್ಯ ಬಜೆಟ್ ಬಳಿಕ ನಿಖರವಾದ ಅನುದಾನಗಳ ಮಾಹಿತಿ ಮತ್ತು ಸ್ವಂತ ನಿಧಿಗಳ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದ್ದು ಆ ಬಳಿಕ ಪಟ್ಟಣ ಪಂಚಾಯಿತಿ ಬಜೆಟ್ ಫೆಬ್ರವರಿ ಅಂತ್ಯದೊಳಗೆ ಮಂಡಿಸಲಾಗುವುದು ಎಂದು ಹೇಳಿದರು.
ಮುಖ್ಯಾಧಿಕಾರಿ ಬಸವರಾಜ್ ಹೆಚ್ ಆರ್ ಸ್ವಾಗತಿಸಿ ಸಭೆ ನಡೆಸಿಕೊಟ್ಟರು. ಸಭೆಯಲ್ಲಿ ಎಂ. ವೆಂಕಪ್ಪ ಗೌಡ, ಶಶಿಕಲಾ ನೀರಬಿದಿರೆ, ಬಾಲಕೃಷ್ಣ ರೈ, ಸುಧಾಕರ್ ಕೇರ್ಪಳ, ಬುದ್ದ ನಾಯ್ಕ್, ರಾಜು ಪಂಡಿತ್, ಬಾಲಕೃಷ್ಣ ಭಟ್, ಕಿಶೋರಿ ಶೇಠ್, ಶೀಲಾ ಕುರುಂಜಿ, ಮುರಳಿ ಮಾವಜಿ, ರಾಜಕೀಯ ಪಕ್ಷಗಳ ಮುಖಂಡರು, ಉದ್ಯಮಿಗಳು ವರ್ತಕರು ಉಪಸ್ಥಿತರಿದ್ದರು.




























