
ಸುಳ್ಯ:ಪಂಜ ಸರಕಾರಿ ಪ್ರೌಢಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಆದಷ್ಟು ಬೇಗ ವರದಿ ತರಿಸಿಕೊಂಡು ಕಟ್ಟಡ ತೆರವು ಮಾಡಿ, ಅನುದಾನ ತರಿಸಿಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಿ ಎಂದು ಶಾಸಕರು ಸೂಚಿಸಿದ ಘಟನೆ ಸುಳ್ಯ ಕೆಡಿಪಿ ಸಭೆಯಲ್ಲಿ ನಡೆದಿದೆ.
ಸುಳ್ಯ ತಾಲೂಕು ಪಂಚಾಯಿತಿ ತ್ರೈಮಾಸಿಕ ಕೆ.ಡಿ.ಪಿ. ಪ್ರಗತಿ ಪರಿಶೀಲನಾ ಸಭೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಶಿಕ್ಷಣಾಧಿಕಾರಿ ಶೀತಲ್. ಯು.ಕೆ ಮಾತನಾಡಿ, ಪಂಜ ಸರಕಾರಿ ಪ್ರೌಢಶಾಲೆಯ ಏಳು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದೆ. ಈ ಕೊಠಡಿಗಳ ಮೌಲ್ಯಮಾಪನ ವರದಿಯನ್ನು ಸಲ್ಲಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಪತ್ರ ಬರೆಯಲಾಗಿದೆ ಎಂದ ಅವರು ಪಂಜ ಹೈಸ್ಕೂಲ್ ಕೊಠಡಿಗಳು ಶಿಥಿಲಗೊಂಡಿರುವುದರಿಂದ ತೊಂದರೆಯಾಗಿರುವ ಬಗ್ಗೆ ತಿಳಿಸಿದರು. ಇಒ ರಾಜಣ್ಣ ಮಾತನಾಡಿ, ಕೊಠಡಿಗಳು ಶಿಥಿಲಾವಸ್ಥೆಯಲ್ಲಿ ಇರುವ ಕಡೆ ಮುನ್ನೆಚ್ಚರಿಕೆ ವಹಿಸುವಂತೆ ನಿರ್ದೇಶನ ನೀಡಿದರು. ಆದಷ್ಟು ಬೇಗ ವರದಿ ತರಿಸಿಕೊಂಡು ಕಟ್ಟಡ ತೆರವು ಮಾಡಿ, ಅನುದಾನ ತರಿಸಿಕೊಂಡು ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಿ ಎಂದು ಶಾಸಕರು ಸೂಚಿಸಿದರು.
ಕಲ್ಮಕಾರು ಗ್ರಾಮದ ಗುಳಿಕಾನದ ಸಂತ್ರಸ್ತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಈಗಾಗಲೇ ಜಂಟಿ ಸರ್ವೆ ನಡೆಸಲಾಗಿದೆ ಎಂದು ತಹಸೀಲ್ದಾರ್ ಮಂಜುಳಾ ಮಾಹಿತಿ ನೀಡಿದರು. ಪಹಣಿಪತ್ರದಲ್ಲಿ ತಿದ್ದಪಡಿ ಮಾಡುವ ಬಗ್ಗೆ ಆದೇಶ ಕೋರಿ ಭೂಮಿ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲು ಎಸಿ ಅವರಿಗೆ ಪತ್ರ ಬರೆಯಲಾಗಿದೆ ಎಂದರು. ಜಂಟಿ ಸರ್ವೆಯ ವರದಿಯನ್ನು ಆದಷ್ಟು ಬೇಗ ತರಿಸಿಕೊಳ್ಳುವಂತೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ಅವರಿಗೆ ಸೂಚಿಸಿದ ತಹಶೀಲ್ದಾರ್ ಅವರು ಬಳಿಕ ನಾವು ಮುಂದಿನ ಪ್ರಕ್ರಿಯೆ ನಡೆಸುತ್ತೇವೆ ಎಂದರು.
ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮಗು ಮೃತಪಟ್ಟ ಬಗ್ಗೆ ಸಭೆಯಲ್ಲಿ ಪ್ರಸ್ತಾಪಗೊಂಡಿತು. ಈ ಬಗ್ಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ತನಿಖಾ ತಂಡ ಆಗಮಿಸಿ ವಿಚಾರಣೆ ನಡೆಸಿ, ಸಂಬಂಧಿಸಿದವರಿಗೆ ವರದಿ ಸಲ್ಲಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಅವರು ತಿಳಿಸಿದರು. ತಾಲೂಕು ಆಸ್ಪತ್ರೆಯ ಎಲುಬು ಮತ್ತು ಮೂಳೆ ತಜ್ಞರಾಗಿದ್ದ ಡಾ.ಗೌತಮ್ ಅವರು ರಜೆ ಪಡೆದು, ರಜೆ ಮುಗಿದ ಬಳಿಕ ಕರ್ತವ್ಯಕ್ಕೆ ಹಾಜರಾಗದ ಬಗ್ಗೆ ಕ್ರಮಕ್ಕೆ ಶಾಸಕರು ಸೂಚಿಸಿದರು ಹಾಗೂ ಬದಲಿ ವೈದ್ಯರ ನೇಮಕಕ್ಕೆ ಕ್ರಮಕ್ಕೆ ಸಲಹೆ ನೀಡಿದರು.
ಸುಳ್ಯ ಜಾತ್ರೆ ಆನ್‌ಲೈನ್‌ಗೇಮ್‌ಗೆ ಅವಕಾಶ ಇಲ್ಲ :
ಸುಳ್ಯ ಜಾತ್ರೋತ್ಸವದಲ್ಲಿ ಆನ್ ಲೈನ್ ಗೇಮ್, ಹಣ ಇಟ್ಟು ಆಡುವ ವಿವಿಧ ಆಟಗಳನ್ನು ಆಡಲಾಗುತ್ತದೆ ಇದಕ್ಕೆಲ್ಲ ಅವಕಾಶ ನೀಡಬಾರದು ಎಂದು ಜಯಪ್ರಕಾಶ್ ನೆಕ್ರೆಪ್ಪಾಡಿ ಒತ್ತಾಯಿಸಿದರು. ಈ ವೇಳೆ ಸರ್ಕಲ್ ಇನ್ ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್ ಆನ್‌ಲೈನ್ ಆಟಕ್ಕೆ ಅವಕಾಶ ನೀಡೋದಿಲ್ಲ. ಜೂಜು ಕಟ್ಟುವುದಕ್ಕೂ ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರಲ್ಲದೆ, ಈ ರೀತಿಯ ವಿಚಾರಗಳು ತಿಳಿದು ಬಂದರೆ ಕ್ರಮಕೈಗೊಳ್ಳುತ್ತೇವೆ ಎಂದರು.
ಸಭೆಗೆ ನಿರಂತರ ಗೈರಾಗುತ್ತಿರುವ ಕೆ.ಎಫ್.ಡಿ.ಸಿ. ಡಿಎಂ ಮೇಲೆ ಕ್ರಮಕ್ಕೆ ನಾಮನಿರ್ದೇಶಿತ ಸದಸ್ಯರು ಒತ್ತಾಯಿಸಿದರು. ಸೂಕ್ತ ಬೆಳೆವಿಮೆ ಪಾವತಿಸುವಂತೆ, ಬಸ್ ಸಮಸ್ಯೆ ಬಗೆಹರಿಸುವಂತೆ, ಕಾಡಾನೆ ಹಾವಳಿ ನಿಯಂತ್ರಣಕ್ಕೆ ಕ್ರಮ ವಹಿಸುವಂತೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸುಳ್ಯ ತಹಸೀಲ್ದಾರ್ ಮಂಜುಳಾ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಸುಳ್ಯ ತಾಲೂಕು ಅಧ್ಯಕ್ಷ ಶಾಹೂಲ್ ಹಮೀದ್ ಕುತ್ತಮೊಟ್ಟೆ ಸೇರಿದಂತೆ ಕೆಡಿಪಿ ನಾಮನಿರ್ದೇಶಿತ ಸದಸ್ಯರು, ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.


























