Home ಜಿಲ್ಲೆ ಮಂಗಳೂರು ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮೆಸ್ಕಾಂ ಅಧಿಕಾರಿ ವಿರುದ್ಧ ಆಕ್ರೋಶ

ಸುಳ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮೆಸ್ಕಾಂ ಅಧಿಕಾರಿ ವಿರುದ್ಧ ಆಕ್ರೋಶ

ಮೆಸ್ಕಾಂ ಜಾಗೃತದಳದ ವಿರುದ್ಧ ಲೋಕಾಯುಕ್ತ ತನಿಖೆಗೆ ಸದಸ್ಯರ ಒತ್ತಾಯ
ಸುಳ್ಯ:ಮೆಸ್ಕಾಂ ಜಾಗೃತ ದಳದ ವಿರುದ್ಧ ಲೋಕಾಯುಕ್ತ ತನಿಖೆ ನಡೆಸಬೇಕು ಹಾಗೂ ದುರ್ನಡತೆ ತೋರುವ ಮೆಸ್ಕಾಂ ಅಧಿಕಾರಿ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆ ತಾಲೂಕು ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸುಳ್ಯದ ಬ್ಯಾಂಕ್‌ವೊಂದರ ಕಟ್ಟಡ ವಾಣಿಜ್ಯ ಸಂಕೀರ್ಣವಾಗಿದ್ದರೂ ಎರಡು ಮೀಟರ್‌ಗಳಿಗೆ ನಕಲಿ ದಾಖಲೆ ಸಲ್ಲಿಸಿ ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆದುಕೊಂಡಿರುವ ಬಗ್ಗೆ ಈ ಸಭೆಯಲ್ಲೂ ಚರ್ಚೆ ನಡೆಯಿತು. ೨೦೧೮ರಿಂದ ಈ ರೀತಿ ಮಾಡಿಕೊಂಡಿದ್ದರೂ ಮೆಸ್ಕಾಂ ಜಾಗೃತ ದಳದವರು ಒಂದು ವರ್ಷದ ಬಿಲ್ ವಸೂಲಿ ಮಾಡಿರುವುದಕ್ಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಬಡವರು ಸಣ್ಣ ತಪ್ಪು ಮಾಡಿದರೂ ದಂಡ ವಿಧಿಸುವ ಜಾಗೃತ ದಳ ಇಷ್ಟು ದೊಡ್ಡ ವಂಚನೆಗೆ ಸೂಕ್ತ ಕ್ರಮವಹಿಸದೇ ಇರುವುದು ಸರಿಯಲ್ಲ, ಈ ಬಗ್ಗೆ ಜಾಗೃತದಳದ ವಿರುದ್ಧ ಲೋಕಾಯುಕ್ತ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಚರ್ಚೆ ನಡೆಸಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆದು ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಯಿತು.
ಮೆಸ್ಕಾಂ ಎಂಜೀಯರ್ ವರ್ತನೆಗೆ ಆಕ್ರೋಶ:
ಸುಳ್ಯ ಮೆಸ್ಕಾಂ ಎಇ ಸುಪ್ರಿತ್ ಅವರ ವಿರುದ್ಧ ಸದಸ್ಯರು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುಪ್ರಿತ್ ಅವರು ವಿದ್ಯುತ್ ಗ್ರಾಹಕರು, ಸಾರ್ವಜನಿಕರ ಜೊತೆ ಸರಿಯಾಗಿ ನಡೆದುಕೊಳ್ಳದೇ ಇರುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ಚರ್ಚಿಸಲಾಗಿ, ಅವರನ್ನು ಇಲ್ಲಿಗೆ ಬರಲು ತಿಳಿಸಿದ್ದರೂ ಬಂದಿಲ್ಲ. ಇದೀಗ ಅವರು ಕಾರಿಗೆ ಹಾನಿ ಮಾಡಿದ್ದಾರೆ ಎಂದು ಅವರ ವಿರುದ್ಧ ಕೇಸ್ ದಾಖಲಾಗಿದೆ. ಯಾಕೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರು ಪ್ರಶ್ನಿಸಿದರು. ಅವರಿಗೆ ನೋಟೀಸ್ ನೀಡಿ. ಹಾಗೂ ಅವರ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ, ಕ್ರಮಕೈಗೊಳ್ಳುವಂತೆ ತಾ.ಪಂ. ಇಒ ರಾಜಣ್ಣ ನಿರ್ದೇಶನ ನೀಡಿದರು.
ಕುಚ್ಚಲು ಅಕ್ಕಿ ನೀಡಿ:
ದಕ್ಷಿಣ ಕನ್ನಡ ಜನತೆ ಕುಚ್ಚಲು ಅಕ್ಕಿ ಬಳಸುತ್ತಿದ್ದಾರೆ. ಆದರೆ ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳ್ತಿಗೆ ಅಕ್ಕಿ ನೀಡಲಾಗುತ್ತಿದೆ. ಇದರ ಉಪಯೋಗ ಈ ಭಾಗದಲ್ಲಿ ಕಡಿಮೆ. ಆದ್ದರಿಂದ ನಮ್ಮ ಜಿಲ್ಲೆಗೆ ಕುಚ್ಚಲು ಅಕ್ಕಿ ಒದಗಿಸಬೇಕು ಎಂದು ಸದಸ್ಯರು ಪ್ರಸ್ತಾಪಿಸಿದರು. ಒಂದು ತಿಂಗಳು ಬೆಳ್ತಿಗೆ, ಒಂದು ತಿಂಗಳು ಕುಚ್ಚಲು ಅಕ್ಕಿ ಒದಗಿಸಿದರೂ ಆಗಬಹುದು ಎಂದು ಸಲಹೆ ನೀಡಲಾಯಿತು. ಈ ಬಗ್ಗೆ ಮೇಲಾಧಿಕಾರಿಗಳಿಗೆ ಬರೆಯಲು ತೀರ್ಮಾಣಿಸಲಾಯಿತು.
ಸುಳ್ಯ ತಾಲೂಕಿನ ೧೮೪ ಕಾರ್ಡ್‌ಗಳು ಪರಿಶೀಲನೆ ಹಂತದಲ್ಲಿದೆ ಎನ್ನುತ್ತೀರಿ, ಅದನ್ನು ವಿಲೇವಾರಿ ಮಾಡುವಂತೆ ಸಮಿತಿ ಅಧ್ಯಕ್ಷರು ಸೂಚಿಸಿದರು. ಗೃಹಲಕ್ಷಿ ಅರ್ಜಿಯಲ್ಲಿ ಆಧಾರ್ ಸೀಡಿಂಗ್ ಆಗದೇ ಎನ್‌ಪಿಸಿಐ ಫೈಲ್ಯುರ್ ಆಗಿರುವ ೨೯ ಫಲಾನುಭವಿಗಳಲ್ಲಿ ೧೫ ಫಲಾನುಭವಿಗಳ ಆಧಾರ್ ಸೀಡಿಂಗ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರು, ಯೋಜನೆ ಅನುಷ್ಠಾನ ಸಮಿತಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ?ಕಾರಿ ರಾಜಣ್ಣ ಸ್ವಾಗತಿಸಿ, ವಂದಿಸಿದರು.