
ಸುಳ್ಯ:ಸುಳ್ಯ ನಗರ ಪಂಚಾಯತಿಗೆ ಒಳಪಟ್ಟ ಶಾಂತಿನಗರ – ಬೆಟ್ಟಂಪಾಡಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ರಸ್ತೆ ದುರಸ್ತಿ ಪಡಿಸಿ ಕೊಡುವಂತೆ ನ.ಪಂ. ಆಡಳಿತಧಿಕಾರಿ ಹಾಗೂ ಸುಳ್ಯ ತಹಸೀಲ್ದಾರ್ ಆಗಿರುವ ಮಂಜುಳಾ ಅವರಿಗೆ ಫಲಾನುಭವಿಗಳು ಮನವಿ ನೀಡಿದ್ದಾರೆ.
ರಸ್ತೆಗಳ ಅವ್ಯವಸ್ಥೆ ಅಲ್ಲದೇ ಈ ಭಾಗದಲ್ಲಿ ಯಾವುದೇ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ರಸ್ತೆಯು ತೀರಾ ಇಕ್ಕಟ್ಟಾಗಿದ್ದು ವಾಹನ ಸಂಚಾರಕ್ಕೆ ಅನಾನುಕೂಲಕರವಾಗಿದೆ. ಶಾಲಾ ಮಕ್ಕಳು ಸೇರಿದಂತೆ ಊರಿನವರು ಪ್ರತಿನಿತ್ಯ ಈ ರಸ್ತೆಗಳನ್ನು ಉಪಯೋಗಿಸುತ್ತಿದ್ದು, ಶಾಲಾ ಮಕ್ಕಳಿಗೆ ನಡೆದಾಡಲು ಕಷ್ಟಕರವಾಗಿದೆ. ರಸ್ತೆಯು ತೀರಾ ಹದಗೆಟ್ಟಿರುವುದರಿಂದ ಊರಿನವರ ಹಾಗು ಶಾಲಾ ಮಕ್ಕಳ ಭದ್ರತೆ ದೃಷ್ಟಿಯಿಂದ ಹಾಗು ಸುಗಮ ಸಂಚಾರಕ್ಕಾಗಿ ಈ ರಸ್ತೆಯನ್ನು ಆಧಷ್ಟು ಬೇಗ ದುರಸ್ತಿಮಾಡಿ, ಚರಂಡಿ ವ್ಯವಸ್ಥೆಯನ್ನು ಕಲ್ಪಿಸಿ, ಎರಡು ವಾಹನಗಳ ಸುಗಮ ಸಂಚಾರಕ್ಕೆ ತಕ್ಕಂತೆ ಅಗಲಗೊಳಿಸಿ ಉತ್ತಮ ವ್ಯವಸ್ಥೆ ಕಲ್ಪಿಸಬೇಕಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ನಗರ ಪಂಚಾಯಿತಿ ಮುಖ್ಯ ಅಧಿಕಾರಿಯವರಿಗೂ ಕೂಡ ಮನವಿಯನ್ನು ನೀಡಿ ಆಗ್ರಹಿಸಿದ್ದಾರೆ.





















