Home ಜಿಲ್ಲೆ ಮಂಗಳೂರು ಸುಳ್ಯದ ರಂಗಮನೆಯಲ್ಲಿ ರಂಗಸಂಭ್ರಮ ಸಮಾರೋಪ: ಹಾಸ್ಯಗಾರ ಮಹೇಶ್ ಮಣಿಯಾಣಿ ಅವರಿಗೆ ವನಜ ಸುಜನಾ ರಂಗಮನೆ ಪ್ರಶಸ್ತಿ...

ಸುಳ್ಯದ ರಂಗಮನೆಯಲ್ಲಿ ರಂಗಸಂಭ್ರಮ ಸಮಾರೋಪ: ಹಾಸ್ಯಗಾರ ಮಹೇಶ್ ಮಣಿಯಾಣಿ ಅವರಿಗೆ ವನಜ ಸುಜನಾ ರಂಗಮನೆ ಪ್ರಶಸ್ತಿ ಪ್ರದಾನ

ಸುಳ್ಯ:ಡಾ.ಜೀವನ್ ರಾಂ ಸುಳ್ಯರ ಮಾತಾಪಿತೃಗಳಾದ ವನಜಾಕ್ಷಿ ಹಾಗೂ ಸುಜನಾ ಸುಳ್ಯ ಇವರ ನೆನಪಿನಲ್ಲಿ ನೀಡುವ ೨೦೨೫-೨೬ ನೇ ಸಾಲಿನ ’ವನಜ ಸುಜನಾ ರಂಗಮನೆ ಪ್ರಶಸ್ತಿ’ಯನ್ನು ಧರ್ಮಸ್ಥಳ ಯಕ್ಷಗಾನ ಮೇಳದ ಹಾಸ್ಯ ಕಲಾವಿದ ಮಹೇಶ್ ಮಣಿಯಾಣಿ ದೊಡ್ಡತೋಟ ಅವರಿಗೆ ಪ್ರದಾನ ಮಾಡಲಾಯಿತು.
ಸುಳ್ಯದ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ಇದರ ಆಶ್ರಯದಲ್ಲಿ ನಡೆದ ರಂಗಸಂಭ್ರಮ- ೨೦೨೬ ಇದರ ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ನಿರಂತರ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ೨೪ ವರ್ಷಗಳನ್ನು ಪೂರೈಸಿದ ಈ ರಂಗಮನೆ ಸಜ್ಜನ ಪ್ರೇಕ್ಷಕರನ್ನು ಸೃಷ್ಟಿಸಿದ ಅಪರೂಪದ ಕಲಾ ಕೇಂದ್ರವಾಗಿದೆ. ಯುವ ಜನತೆಯ ಪ್ರತಿಭೆಗೆ ವೇದಿಕೆಯಾಗುವ ಯುವಜನ ಮೇಳಗಳನ್ನು ಮತ್ತೆ ಆರಂಭಿಸಬೇಕೆಂಬ ಪ್ರಯತ್ನ ನಡೆಯುತ್ತಿದೆ. ಹೆತ್ತವರ ನೆನಪನ್ನು ಸದಾ ಹಸಿರಾಗಿಸುವ ಜೀವನ್ ರಾಂ ರವರು ಮಾದರಿಯಾಗಿದ್ದಾರೆ ಎಂದು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡು ಮಾತನಾಡಿ ” ಈ ತರಹದ ಸಹೃದಯೀ ಪ್ರೇಕ್ಷಕ ವರ್ಗ ನಗರಗಳಲ್ಲಿ ಕಾಣಲು ಬಹಳ ಕಷ್ಟ..ಇಲ್ಲಿ ದೊಡ್ಡವರ ಜೊತೆ ಯುವಕರು ಹಾಗೂ ಮಕ್ಕಳೂ ರಂಗಮನೆಯಲ್ಲಿ ಇದ್ದೀರಿ. ಹೊಸ ಪೀಳಿಗೆಯಲ್ಲಿ ಸಾಂಸ್ಕೃತಿಕ ಆಸಕ್ತಿ ಬೆಳೆಸುವ ಜೀವನ್ ರ ಕೆಲಸ ಪ್ರಶಂಸನೀಯ ಎಂದರು.
ಹಿರಿಯ ರಂಗಕರ್ಮಿ ಮಹಾಬಲೇಶ್ವರ ಹೆಬ್ಬಾರ್ ಮಾತನಾಡಿ ” ಸ್ವಂತ ಮನೆಯನ್ನೇ ಸಾಂಸ್ಕೃತಿಕ ಕೇಂದ್ರವನ್ನಾಗಿಸಿದ ಉದಾಹರಣೆ ಮತ್ತೊಂದಿಲ್ಲ. ಜೀವನ್‌ರ ಕರ್ತವ್ಯ ಕ್ಷಮತೆ, ಬದ್ಧತೆ, ಶಿಸ್ತು, ರಂಗ ಜವಾಬ್ದಾರಿ, ಸಮಯ ಪ್ರಜ್ಞೆ , ನಾಟಕದ ಗುಣಮಟ್ಟ ಉತ್ಕೃಷ್ಟವಾದುದ್ದು ಎಂದು ಹೇಳಿದರು.
ಇದೇ ಸಂದರ್ಭ ಯುವ ಭರತನಾಟ್ಯ ಕಲಾವಿದೆ ಅದಿತಿ ಲಕ್ಷ್ಮೀ ಭಟ್ , ನೀನಾಸಂ ಪದವೀಧರರಾದ ಯಶವಂತ್ ಬೆಳ್ತಂಗಡಿ ಹಾಗೂ ಸುನಿಲ್ ಕಲ್ಲಕೊಪ್ಪ ಅವರನ್ನು ಶಾಸಕರು ಸನ್ಮಾನಿಸಿದರು.
ವೇದಿಕೆಯಲ್ಲಿ ಸದಸ್ಯರಾದ ಕೃಷ್ಣಮೂರ್ತಿ ಕೆ. ವಿನೋದಿನಿ ಎನ್.ರೈ, ಕುಮಾರ ಸುಬ್ರಹ್ಮಣ್ಯ, ವಾಮನ ಕೊಯಿಂಗಾಜೆ, ಕಮಲಾಕ್ಷ ಅಡ್ಕಾರು ಹಾಗೂ ಮನುಜ ನೇಹಿಗ ಸುಳ್ಯ ಉಪಸ್ಥಿತರಿದ್ದರು. ಡಾ| ಜೀವನ್ ರಾಂ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ, ಡಾ.ವಿದ್ಯಾಶಾರದ ಕಾನಾವು ವಂದಿಸಿದರು. ಸುಶ್ಮಿತಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ರಂಗವೈಭವ :
ರಂಗ ಸಂಭ್ರಮದ ಎರಡನೇ ದಿನ ಮೂಡುಬಿದಿರೆಯ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಅಭಿನಯದ, ಮನುಜ ನೇಹಿಗ ಸಂಗೀತ ಸಂಯೋಜಿಸಿದ ‘ಮಗು ಮತ್ತು ಮರ’ ಕಿರುನಾಟಕ, ಅದಿತಿ ಲಕ್ಷ್ಮೀ ಭಟ್ ಮಂಗಳೂರು ಇವರಿಂದ ಭರತನಾಟ್ಯ, ಮಹೇಶ್ ಮಣಿಯಾಣಿ ಇವರಿಂದ ಹಾಸ್ಯ ರಸ ವೇಷ ಹಾಗೂ ಉಜಿರೆಯ ಎಸ್.ಡಿ.ಎಂ.ರಂಗ ಅಧ್ಯಯನ ಕೇಂದ್ರದವರಿಂದ ‘ಭೀಷ್ಮಾಸ್ತಮಾನ’ ನಾಟಕ ಪ್ರದರ್ಶನಗೊಂಡವು.