
ಸಂಜೆವಾಣಿ ನ್ಯೂಸ್
ಮೈಸೂರು: ಜ.24:- ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರ ಜನ್ಮದಿನ ಆಚರಿಸಿದರಷ್ಟೇ ಸಾಲದು; ಅವರ ಆದರ್ಶ ವಿಚಾರಗಳನ್ನು ಜೀವನದಲ್ಲಿ ಆದರ್ಶವಾಗಿ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ ಹೇಳಿದರು.
ನಗರದಲ್ಲಿ ನ್ಯೂ ಸಯ್ಯಾಜಿರಾವ್ ರಸ್ತ ಶುಕ್ರವಾರ ಸೈನಿಕ ಅಕಾಡೆಮಿ ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ನಡೆದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ 129ನೇ ಜನ್ಮದಿನದ ಅಂಗವಾಗಿ ಜೈ ಹಿಂದ್ ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ 30ಕ್ಕೂ ಹೆಚ್ಚು ಯುವಕರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು ಮತದಾನ ಶಿಬಿರವನ್ನು ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಹೆಚ್ಚು ರಾಷ್ಟ್ರೀಯ ಮನೋಭಾವ ದೇಶಪ್ರೇಮದ ವೈಚಾರಿಕವಾಗಿ ಚಿಂತಿಸಬೇಕು. ನೇತಾಜಿ ಅವರು ಹೇಳಿದಂತೆಯೇ ಪ್ರತಿಯೊಂದು ವಿಭಾಗದಲ್ಲೂ ನಡೆಯುವ ಅನ್ಯಾಯವನ್ನು ಪ್ರಶ್ನಿಸುವ ಗುಣ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಬೋಸ್ ಅವರ ವಿಚಾರಗಳು ಯುವಜನತೆಗೆ ಪ್ರೇರಣೆಯ ಕಥನಗಳಾಗಿವೆ. ಸ್ವತಂತ್ರ ಹೋರಾಟದಲ್ಲಿ ರಾಜೀರಹಿತ ಹೋರಾಟ ಮಾಡಿದ್ದರು. ತಮ್ಮ ಬಾಲ್ಯದಿಂದಲೂ ಇಡೀ ದೇಶದ ಜನರ ವಿಮುಕ್ತಿಗಾಗಿ, ಶೋಷಣೆಯಿಂದ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಸೈನಿಕ ಅಕಾಡೆಮಿಯ ಸಂಸ್ಥಾಪಕ ಸಿ.ಎಂ.ಶ್ರೀಧರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಮುತ್ತಣ್ಣ, ಬಿಜೆಪಿ ಮುಖಂಡ ಜೋಗಿ ಮಂಜು, ನಗರಪಾಲಿಕೆ ಮಾಜಿ ಸದಸ್ಯ ಜಗದೀಶ್, ದೂರ ರಾಜಣ್ಣ, ಸದಾಶಿವ್, ಆನಂದ್, ಪ್ರಭು, ಮಮತಾ, ಶಿವು ಇನ್ನಿತರರು ಹಾಜರಿದ್ದರು.


























