Home ಜಿಲ್ಲೆ ಮಂಗಳೂರು ಸುಬ್ರಹ್ಮಣ್ಯ ಕ್ರಾಸ್ ರಸ್ತೆ ಗುಂಡಿಗೆ ಮುಕ್ತಿ ಯಾವಾಗ..!

ಸುಬ್ರಹ್ಮಣ್ಯ ಕ್ರಾಸ್ ರಸ್ತೆ ಗುಂಡಿಗೆ ಮುಕ್ತಿ ಯಾವಾಗ..!

filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

ಪುತ್ತೂರು; ಮಳೆಗಾಲ ಆರಂಭವಾದ ಬಳಿಕ ರಸ್ತೆಗಳಲ್ಲಿ ಗುಂಡಿ ಬೀಳುವುದು ಸಹಜ. ಆದರೆ ಮಳೆಗಾಲದ ಆರಂಭಕ್ಕೆ ಮೊದಲೇ ಗುಂಡಿ ಬಿದ್ದರೂ ಅದನ್ನು ದುರಸ್ಥಿಪಡಿಸುವ ಚಿಂತನೆ ನಮ್ಮ ಇಲಾಖೆಗಳಿಗಿಲ್ಲ ಎಂಬುವುದಕ್ಕೆ ಸ್ಪಷ್ಟ ಉದಾಹರಣೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಹಳೆಗೇಟು (ಸುಬ್ರಹ್ಮಣ್ಯ ಕ್ರಾಸ್) ಎಂಬಲ್ಲಿ ಉಪ್ಪಿನಂಗಡಿ-ಕಡಬ ರಸ್ತೆಯ ಆದಿಯಲ್ಲಿದೆ.
ಕಳೆದ ಕೆಲ ತಿಂಗಳುಗಳಿಂದ ಈ ರಸ್ತೆಯಲ್ಲಿರುವ ಗುಂಡಿ ವಾಹನ ಸವಾರರ ಪಾಲಿಗೆ ಸವಾಲಾಗಿದೆ. ಹೆದ್ದಾರಿಯ ಮುಗಿಯದ ಕೆಲಸಗಳ ನಡುವೆ ರಸ್ತೆಯ ಆರಂಭದಲ್ಲಿಯೇ ಇರುವ ಈ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಇಲಾಖೆ ವಿಫಲವಾಗಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕಳೆದ ೧೦ ವರ್ಷಗಳಿಂದ ನಡೆಯುತ್ತಲೇ ಇದೆ. ಈ ಸುಬ್ರಹ್ಮಣ್ಯ ಕ್ರಾಸ್ ಬಳಿಯಲ್ಲಿನ ಹೊಂಡ ನಿರ್ಮಾಣಕ್ಕೆ ಈ ಹೆದ್ದಾರಿ ಕಾಮಗಾರಿಯ ಕೊಡುಗೆಯೂ ಇದೆ. ಈ ರಸ್ತೆ ಸಂಪರ್ಕದ ಭಾಗವನ್ನು ವಾಹನ ಸವಾರರ ಪಾಲಿಗೆ ಸಂಕಷ್ಟ ಉಂಟು ಮಾಡುವಂತೆ ಮಾಡಿರುವುದು ಈ ಹೆದ್ದಾರಿ ಕಾಮಗಾರಿ. ಈ ಸ್ಥಳವನ್ನು ಕಾಂಕ್ರೀಟಿಕರಣ ಮಾಡದೆ ಬಿಟ್ಟ ಕಾರಣ ಇಲ್ಲೊಂದು ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಕಡಬ ಕಡೆಯಿಂದ ಬರುವ ವಾಹನಗಳು ಹೆದ್ದಾರಿಗೆ ತಿರುವು ಪಡೆಯುವಲ್ಲಿ ಹೆದ್ದಾರಿ ಇಲಾಖೆಯ ಕಾಮಗಾರಿಯೇ ನಡೆಸಲಾಗಿಲ್ಲ. ಇಲ್ಲಿ ದಿಬ್ಬವೊಂದನ್ನು ನಿರ್ಮಿಸಿರುವ ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರಿಗೆ ವಾಹನ ಸವಾರರು ಪ್ರತೀ ದಿನವೂ ಹಿಡಿಶಾಪ ಹಾಕುತ್ತಿದ್ದಾರೆ. ಈ ಸ್ಥಳದ ಅಕ್ಕಪಕ್ಕದಲ್ಲಿಯೇ ಓಡಾಡುವ ಈ ಹೆದ್ದಾರಿ ಗುತ್ತಿಗೆ ಪಡೆದಿರುವ ಮಂದಿಗೆ ಜನರ ಕಷ್ಟ ಅರ್ಥವಾಗಿಲ್ಲ. ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಇದೆಲ್ಲಾ ಅರ್ಥವಾಗೋದಿಲ್ಲ.
ಹಗ್ಗಜಗ್ಗಾಟ ಜನತೆಗೆ ಸಂಕಷ್ಟ..!
ಸುಬ್ರಹ್ಮಣ್ಯ ಕ್ರಾಸ್ ಬಳಿಯ ರಸ್ತೆ ದುರವಸ್ಥೆಗೆ ಕಾರಣ ಹೆದ್ದಾರಿ ಕಾಮಗಾರಿ. ಆದರೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯ ಜವಾಬ್ದಾರಿ ಲೊಕೋಪಯೋಗಿ ಇಲಾಖೆಯದ್ದಾಗಿದೆ. ಈ ರಸ್ತೆಯ ಸಂಪರ್ಕದ ರಸ್ತೆಯನ್ನು ಸರಿಪಡಿಸುವುದು ಹೆದ್ದಾರಿ ಇಲಾಖೆಗೆ ಸೇರಿದೆ. ಯಾಕೆಂದರೆ ಅದನ್ನು ಕುಲಗೆಡಿಸಿದವರು ಕಾಮಗಾರಿ ಗುತ್ತಿಗೆದಾರ ಎನ್ನುವುದು ಒಂದು ವಾದವಾಗಿದ್ದು, ಲೊಕೋಪಯೋಗಿ ಇಲಾಖೆ ರಸ್ತೆ ಗುಂಡಿ ಮುಚ್ಚಲು ಯಾಕೆ ಮೀನಾಮೇಷ ಎಣಿಸುತ್ತಿದೆ ಎಂಬುವುದೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ. ಹೆದ್ದಾರಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳ ಹಗ್ಗಜಗ್ಗಾಟದಲ್ಲಿ ಈ ರಸ್ತೆಯ ಸಂಚಾರಿಗಳು ಮಾತ್ರ ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಈ ಇಲಾಖೆಗಳ ಹಾಗೂ ಗುತ್ತಿಗೆದಾರರ ಸಮಸ್ಯೆ ಏನೇ ಇರಲಿ ಉಪ್ಪಿನಂಗಡಿ-ಕಡಬ ರಸ್ತೆಯ ಗುಂಡಿಯನ್ನು ಮುಚ್ಚುವ ಜವಾಬ್ದಾರಿ ಲೊಕೋಪಯೋಗಿ ಇಲಾಖೆಗೆ ಸೇರಿದೆ. ವಾಹನ ಸವಾರರಿಗೆ ಅನುಕೂಲವಾಗುವಂತೆ ಸುಬ್ರಹ್ಮಣ್ಯ ಕ್ರಾಸ್ ಬಳಿಯ ರಸ್ತೆ ಹೊಂಡಕ್ಕೆ ಮುಕ್ತಿ ನೀಡುವ ಕೆಲಸ ಲೊಕೋಪಯೋಗಿ ಇಲಾಖೆ ಮಾಡಬೇಕಾಗಿದೆ. ಇನ್ನು ಹೆಚ್ಚು ಮಳೆ ಆರಂಭವಾದರೆ ಈ ಗುಂಡಿ ಮುಚ್ಚಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ತಕ್ಷಣ ಗುಂಡಿಗೊಂದು ಪರಿಹಾರ ಕಂಡುಕೊಳ್ಳಲು ಇಲಾಖೆ ಮುಂದಾಗಬೇಕು ಎಂಬುವುದು ವಾಹನ ಸವಾರರ ಆಗ್ರಹವಾಗಿದೆ.
ಕಣ್ಣು ಕಾಣದ ಗಾವಿಲರು..
ಕಳೆದ ಹಲವು ಸಮಯದಿಂದ ಸುಬ್ರಹ್ಮಣ್ಯ ಕ್ರಾಸ್ ಬಳಿಯಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಆದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಯಾರೂ ಮುಂದಾಗುತ್ತಿಲ್ಲ. ಈ ಭಾಗದಿಂದಲೇ ಅಧಿಕಾರಿಗಳೂ ಓಡಾಡುತ್ತಾರೆ. ಹೆದ್ದಾರಿ ಇಲಾಖೆಯ ಕಾಮಗಾರಿಯ ಗುತ್ತಿಗೆದಾರರ ಅವಾಂತರದಿಂದ ಇಲ್ಲಿ ಸಮಸ್ಯೆ ಉಂಟಾಗಿದೆ. ಎರಡೂ ಇಲಾಖೆಗಳ ಅಧಿಕಾರಿಗಳು ವಾಹನ ಸವಾರರ ಸಮಸ್ಯೆಗೆ ಕಣ್ಣು ಕಾಣದ ಗಾವಿಲರಂತೆ ವರ್ತಿಸುತ್ತಿದ್ದಾರೆ. ತಕ್ಷಣ ಇಲ್ಲಿನ ಹೊಂಡ ಮತ್ತು ಕಾಂಕ್ರಿಟೀಕರಣ ನಡೆಸಲು ಇಲಾಖೆಗಳು ಮುಂದಾಗಬೇಕು-ಮಹಮ್ಮದ್ ರಫೀಕ್ ಗಂಡಿಬಾಗಿಲು ನಿತ್ಯ ಪ್ರಯಾಣಿಕರು.

ಮೇಘಾ ಪಾಲೆತ್ತಾಡಿ